ಮಂಗಳೂರು: ಯೋಜನೆಗಳು, ಅಭಿವೃದ್ಧಿ, ರೆಸಾರ್ಟ್‌ಗಳು, ಹೋಂಸ್ಟೇ ಹೆಸರಿನಲ್ಲಿ ಪಶ್ಚಿಮಘಟ್ಟದ ಮೇಲೆ ನಿರಂತರ ಪ್ರಹಾರ ನಡೆಯುತ್ತಿದ್ದು, ಪಶ್ಚಿಮಘಟ್ಟದ ರಕ್ಷಣೆಯಾಗಲು ಮಾಧವ ಗಾಡ್ಗೀಳ್ ವರದಿ ಕಡ್ಡಾಯವಾಗಿ ಅನುಷ್ಠಾನಗೊಳ್ಳಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಒತ್ತಾಯಿಸಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ‘ಹಿಂದೆ ಪ್ರಸ್ತಾಪವಾಗಿದ್ದ ಪಶ್ಚಿಮ ಘಟ್ಟ ರಕ್ಷಣಾ ಪಡೆ ರಚನೆಯಾಗಬೇಕು. ಹಿಂದೆ ಕೃಷಿ ಭೂಮಿಯನ್ನು ಕೃಷಿಕ ಮಾತ್ರ ಖರೀದಿಸಲು ಅವಕಾಶವಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಲು ಅವಕಾಶವಾಗಿದೆ. ಇದರಿಂದ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುವ ಅಪಾಯವಿದೆ. ಹೀಗಾಗಿ, ಜೌಗು ಭೂಮಿ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು’ ಎಂದರು.
ವನ್ಯಜೀವಿ ಮಂಡಳಿಗೆ ರಾಜಕಾರಣಿಗಳ ಮಕ್ಕಳ ನೇಮಕದ ಬದಲಾಗಿ, ಪರಿಸರ ತಜ್ಞರು, ಪರಿಸರವಾದಿಗಳನ್ನು ನೇಮಕ ಮಾಡಬೇಕು. ಶೋಲಾ ಅರಣ್ಯ ನಾಶದಿಂದ ಭೂಮಿಗೆ ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದ ಭೂ ಕುಸಿತ ಸಂಭವಿಸುತ್ತಿದೆ ಎಂದು ಆರೋಪಿಸಿದರು.
ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ, ‘ಅರಣ್ಯ ಒತ್ತುವರಿ, ಹೋಂಸ್ಟೇಗಳು, ಎತ್ತಿನಹೊಳೆಯಂತಹ ಯೋಜನೆಗಳು ಭೂ ಕುಸಿತಕ್ಕೆ ಕಾರಣವಾಗುತ್ತಿವೆ. ಹಿಂದೆ ಯಾವುದೇ ಯೋಜನೆ ಅನುಷ್ಠಾನದ ಪೂರ್ವದಲ್ಲಿ ತಜ್ಞರ ಸಮಿತಿ ನೇಮಕ ಮಾಡಿ ವರದಿ ಪಡೆದು ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಈಗ ನಕಲಿ ವರದಿ ಇಟ್ಟುಕೊಂಡು ತರಾತುರಿಯಲ್ಲಿ ಯೋಜನೆಗಳು ಜಾರಿಯಾಗುತ್ತವೆ. ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯ ಮೀರಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ’ ಎಂದರು.
ಕಾಡಿನೊಳಗೆ ಚಾರಣವನ್ನು ಸರ್ಕಾರ ರದ್ದುಗೊಳಿಸಿದರೆ, ಹೋಂಸ್ಟೇಗಳು ಕೂಡ ಕಡಿಮೆಯಾಗುತ್ತವೆ. ಕಾಡನ್ನು ಅದರ ಪಾಡಿಗೆ ಬಿಟ್ಟರೆ ಅದು ರಕ್ಷಣೆಯಾಗುತ್ತದೆ. ಬೆಂಗಳೂರು– ಮಂಗಳೂರು ನಡುವೆ ಪ್ರಯಾಣದ ಅಂತರ ಕಡಿಮೆ ಮಾಡಲು ಸುರಂಗ ಮಾರ್ಗದ ಯೋಜನೆ ಜಾರಿಗೊಳಿಸಿದರೆ, ಇನ್ನಷ್ಟು ಅವಾಂತರಗಳು ಘಟಿಸುವುದರಲ್ಲಿ ಅನುಮಾನವಿಲ್ಲ. ಮಾಧವ ಗಾಡ್ಗೀಳ್ ವರದಿಯು ಪರಿಸರ ಪೂರಕವಾಗಿದ್ದು, ಒತ್ತುವರಿದಾರರ ಲಾಬಿಯಿಂದ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕಾರ್ಯ ನಡೆದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಹರೀಶ್ ಕುಮಾರ್, ಜಾನಸ್, ಇಯಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.