ADVERTISEMENT

ದ.ಕ. ಕೈಗಾರಿಕಾ ಮಾಲಿನ್ಯ– ನೀರಿ ಸಂಸ್ಥೆಯಿಂದ ಅಧ್ಯಯನ

ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯಿಂದ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 15:40 IST
Last Updated 20 ಮಾರ್ಚ್ 2023, 15:40 IST
ಸಭೆಯಲ್ಲಿ  ಬಿ.ಎಂ. ಫಾರೂಕ್ ಮಾತನಾಡಿದರು. ಸಮಿತಿಯ ಸದಸ್ಯರಾದ ಎಸ್.ವಿ. ಸಂಕನೂರ, ಕೆ.ಎ. ತಿಪ್ಪೇಸ್ವಾಮಿ ಸುಶೀಲ್‌ ಜಿ. ನಮೋಶಿ ಇದ್ದಾರೆ
ಸಭೆಯಲ್ಲಿ  ಬಿ.ಎಂ. ಫಾರೂಕ್ ಮಾತನಾಡಿದರು. ಸಮಿತಿಯ ಸದಸ್ಯರಾದ ಎಸ್.ವಿ. ಸಂಕನೂರ, ಕೆ.ಎ. ತಿಪ್ಪೇಸ್ವಾಮಿ ಸುಶೀಲ್‌ ಜಿ. ನಮೋಶಿ ಇದ್ದಾರೆ   

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಿಂದ (ನೀರಿ) ಅಧ್ಯಯನ ನಡೆಸಲು ಕ್ರಮಕೈಗೊಳ್ಳಲಾಗಿದೆ’ ‌ಎಂದು ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ತಿಳಿಸಿದರು.

ವಾಣಿಜ್ಯ, ಕೈಗಾರಿಕೆ ಮತ್ತು ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನಲ್ಲಿ ಸರ್ಕಾರವು ನೀಡಿರುವ ಭರವಸೆಗಳ ಜಾರಿ ಕುರಿತು ಇಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ನಗರದ ಹೊರವಲಯದ ಬೈಕಂಪಾಡಿ ಮತ್ತು ಆಸುಪಾಸಿನ ಕೈಗಾರಿಕೆಗಳು ಹೆಚ್ಚು ಇರುವ ಕಡೆ ಕೈಗಾರಿಕೆಗಳಿಂದ ಪರಿಸರ ಮಾಲಿನ್ಯದ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ. ಇಲ್ಲಿನ ನದಿಗೆ ಕಲುಷಿತ ನೀರು ಸೇರಿ ಮೀನುಗಳು ಸತ್ತಿವೆ. ಇದರಿಂದ ಮೀನುಗಾರಿಕೆಗೂ ಸಮಸ್ಯೆ ಉಂಟಾಗಿದೆ. ಎರಡು ತಳಿಯ ಮೀನುಗಳು ಸಂಪೂರ್ಣ ನಾಶವಾಗಿವೆ ಎಂದು ಸ್ಥಳೀಯರು ದೂರುತ್ತಾರೆ. ಇಲ್ಲಿರುವ ಕೈಗಾರಿಕೆಗಳ ಅಧಿಕಾರಿಗಳು ಈ ಆರೋಪಗಳನ್ನು ಅಲ್ಲಗಳೆಯುತ್ತಿದ್ದಾರೆ. ಮಾಲಿನ್ಯ ನಡೆದಿದೆಯೋ, ಇಲ್ಲವೋ ಎಂಬ ಬಗ್ಗೆ ತಟಸ್ಥ ಸಂಸ್ಥೆಯಿಂದ (ನೀರಿ) ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ. ನೀರಿಯು ಮೇ ತಿಂಗಳಿನಲ್ಲಿ ಮಧ್ಯಂತರ ವರದಿಯನ್ನು ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಿದೆ’ ಎಂದರು.

ADVERTISEMENT

‘ನಗರದ ಹೊರವಲಯದಲ್ಲಿ ಕೈಗಾರಿಕೆಗಳು ಜಾಸ್ತಿ ಇರುವ ಕಡೆ ಜನರಲ್ಲಿ ಕ್ಯಾನ್ಸರ್‌, ಚರ್ಮರೋಗ, ಹೃದಯಸಂಬಂಧಿ ಕಾಯಿಲೆಗಳು ಹೆಚ್ಚಾಗಿವೆ. ಇಲ್ಲಿ 15 ಕಿ.ಮೀ. ವ್ಯಾಪ್ತಿಯಲ್ಲಿ ಜನರ ಆರೋಗ್ಯ ಸಮಸ್ಯೆಗಳ ಕುರಿತು ಕೆಎಂಸಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಇತರ ವೈದ್ಯಕೀಯ ಸಂಸ್ಥೆಗಳ ನೆರವಿನಿಂದ ಅಧ್ಯಯನ ನಡೆಸಲು ಜಿಲ್ಲಾಡಳಿತವು ಕ್ರಮಕೈಗೊಳ್ಳಲಿದೆ. ಮೂರು ತಿಂಗಳಲ್ಲಿ ಅಧ್ಯಯನ ವರದಿ ಸಲ್ಲಿಕೆ ಆಗಲಿದೆ. ಈ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಎಂಆರ್‌ಪಿಎಲ್, ಐಎಸ್‌ಪಿಆರ್‌ಎಲ್‌ ಮುಂತಾದ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳು ಜಾಗ ಬಿಟ್ಟುಕೊಟ್ಟ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಈ ಸಂಸ್ಥೆಗಳ ಶೇ 80ರಷ್ಟು ಉದ್ಯೋಗಗಳಲ್ಲಿ ಹೊರಗಿನವರೇ ಇದ್ದಾರೆ. ಸ್ಥಳೀಯರು ಬಿಟ್ಟುಕೊಟ್ಟ ಜಮೀನಿಗೆ ಸಮರ್ಪಕ ಪರಿಹಾರವನ್ನೂ ಒದಗಿಸಿಲ್ಲ. ಬದಲಿ ನಿವೇಶನ ನೀಡಿಲ್ಲ ಎಂಬ ದೂರುಗಳು ಸಮಿತಿಗೆ ಬಂದಿವೆ. ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಕೆಲವು ತಾಂತ್ರಿಕ ತೊಡಕು ಇರುವ ಬಗ್ಗೆ ಎಂಆರ್‌ಪಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಎಷ್ಟು ಉದ್ಯೋಗಗಳು ಲಭ್ಯ, ಅವುಗಳಲ್ಲಿ ಎಷ್ಟು ಉದ್ಯೋಗಗಳು ಸ್ಥಳೀಯರಿಗೆ ಲಭಿಸಿವೆ ಎಂಬ ವರದಿಯನ್ನು ಕೇಳಿದ್ದೇವೆ’ ಎಂದರು.

‘ಉಳ್ಳಾಲದಲ್ಲಿ ಒಳಚರಂಡಿ ಅವ್ಯವಸ್ಥೆ ಸರಿಪಡಿಸುವಂತೆಯೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ. ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ದುರಂತ ಉಮಟಾದರೆ, ಅದನ್ನು ನಿಯಂತ್ರಿಸಲು 9 ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವ ಪ್ರಸ್ತಾವ ಇದ್ದು, ಎರಡು ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಏರಿಯಲ್‌ ಲ್ಯಾಡರ್‌, ಫೋಮ್‌ ಮುಂತಾದ ಪರಿಕರಗಳನ್ನು ಒದಗಿಸುವಂತೆ ಸೂಚಿಸಿದ್ದೇವೆ’ ಎಂದರು.

ಸಮಿತಿಯ ಸದಸ್ಯರಾದ ಆಯನೂರು ಮಂಜುನಾಥ, ಎಸ್.ವಿ. ಸಂಕನೂರ, ಕೆ.ಎ.ತಿಪ್ಪೇಸ್ವಾಮಿ ಸುಶೀಲ್‌ ನಮೋಶಿ, ಎಸ್. ರುದ್ರೇಗೌಡ, ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಹರಿಶೇಖರನ್‌, ಸಿಸಿಎಫ್‌ ಗೋಪಾಲ್‌, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.