ಮಂಗಳೂರು: ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆಯಿಂದ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಗೊಂದಲದಲ್ಲಿದೆ. ಇದರ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಟ್ಯುಟೋರಿಯಲ್ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಹಾಯವಿಲ್ಲದೇ ಇಷ್ಟು ದೊಡ್ಡ ಹಗರಣ ಅಸಾಧ್ಯ’ ಎಂದರು.
‘ನೀಟ್‌ನಲ್ಲಿ ದ್ವಿತೀಯ ಪಿ.ಯು ಅಂಕವನ್ನು ಪರಿಗಣಿಸುವುದೇ ಇಲ್ಲ. ನೀಟ್‌ಗೆ ಪ್ರತ್ಯೇಕ ಪಠ್ಯಕ್ರಮವೂ ಇಲ್ಲ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದ್ದೆ. ಅದರ ಫಲವಾಗಿ ರಾಜ್ಯ ಸರ್ಕಾರ ನೀಟ್ ಪರೀಕ್ಷೆಯಿಂದ ಹೊರಬರಲು ತೀರ್ಮಾನಿಸಿದೆ’ ಎಂದರು.
‘ಬೋವಿ ಅಭಿವೃದ್ಧಿ ನಿಗಮದಲ್ಲಿ ವೇತನ ಕೋಟಾದ ದುಡ್ಡನ್ನು ಬೋಗಸ್ ಕಂಪನಿಗಳಿಗೆ ಕಳುಹಿಸಿಕೊಡಲಾಗಿದೆ. ಈ ₹ 100 ಕೋಟಿ ಹಗರಣದಲ್ಲಿ ಆಗ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರ ಪಾಲೂ ಇದೆ. ಹಗರಣ ನಡೆದಿರುವುದನ್ನು ಸದನದಲ್ಲಿ ಅವರೇ ಒಪ್ಪಿಕೊಂಡಿದ್ದರು. ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಸುಮ್ಮನಾಗಿದ್ದರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ವಿಧಾನ ಪರಿಷತ್ ಅಧಿವೇಶನ ನಡೆದಿರುವ 8 ದಿನಗಳಲ್ಲಿ ಸಾರ್ವಜನಿಕ ವಿಚಾರಗಳ ಸಂಬಂಧ 45 ಪ್ರಶ್ನೆಗಳನ್ನು ಕೇಳಿದ್ದೆ. ಎಲ್ಲದಕ್ಕೂ ಉತ್ತರಗಳು ಸಿಕ್ಕಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.