ADVERTISEMENT

ನೇಹಾ ಕೊಲೆ ಪ್ರಕರಣ | ಸಿ.ಎಂ. ಹೇಳಿಕೆಯಿಂದ ದೇಶದ್ರೋಹಿಗಳಿಗೆ ಶಕ್ತಿ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 13:21 IST
Last Updated 20 ಏಪ್ರಿಲ್ 2024, 13:21 IST
<div class="paragraphs"><p>ಸಮಾವೇಶದಲ್ಲಿ ಮಾಜಿ ಮೇಯರ್‌ ಕವಿತಾ ಸನಿಲ್‌ ಅವರು ವಿಜಯೇಂದ್ರ ಹಾಗೂ ಅಭ್ಯರ್ಥಿ ಬ್ರಿಜೇಶ್‌ ಚೌಟ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.</p></div>

ಸಮಾವೇಶದಲ್ಲಿ ಮಾಜಿ ಮೇಯರ್‌ ಕವಿತಾ ಸನಿಲ್‌ ಅವರು ವಿಜಯೇಂದ್ರ ಹಾಗೂ ಅಭ್ಯರ್ಥಿ ಬ್ರಿಜೇಶ್‌ ಚೌಟ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

   

ಬಂಟ್ವಾಳ: ‘ಹುಬ್ಬಳ್ಳಿಯಲ್ಲಿ ನಡೆದ, ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ, ದೇಶದ್ರೋಹಿಗಳಿಗೆ ಹಾಗೂ ಕೊಲೆಗಡುಕರಿಗೆ ಒಂದು ರೀತಿ ಶಕ್ತಿ ತುಂಬುವಂತಿದೆ. ರಾಜ್ಯದ ಮುಖ್ಯಮಂತ್ರಿ ಎಂಬುದನ್ನೂ ಮರೆತು ಅವರು ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣವನ್ನು ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರ ಪರ ಮತಯಾಚಿಸಲು ಇಲ್ಲಿ ರೋಡ್‌ ಶೋ ನಡೆಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದರು.

ADVERTISEMENT

‘ನೇಹಾ ಕೊಲೆಯನ್ನು ಬಿಜೆಪಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೊಲೆ ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಆಗುವುದಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸರಿಯೇ ಎಂಬುದು ಪ್ರಶ್ನೆ. ಅವರ ತುಷ್ಟೀಕರಣ ನೀತಿಗೆ ರಾಜ್ಯದ ಜನ ಬೆಲೆ ತೆರುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ ಈ ಕುರಿತ ಹೋರಾಟವನ್ನು ಕೈಗೆತ್ತಿಕೊಂಡಿದೆ’ ಎಂದರು.

‘ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್‌ ಹೊರಟಿದೆ. ದೇಶದ ರಕ್ಷಣೆ, ಸುರಕ್ಷತೆ, ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಬಗ್ಗೆ ರಾಜ್ಯದ ಪ್ರಜ್ಞಾವಂತ ಮತದಾರರಿಗೆ ಜ್ಞಾನೋದಯ ಆಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನರೂ ಭರವಸೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನವರ ನಾಟಕ ಜನರ ಮುಂದೆ ನಡೆಯೋದಿಲ್ಲ. ಬಿಜೆಪಿ– ಜೆಡಿಎಸ್‌ ಮೈತ್ರಿ ಕೂಟಕ್ಕೆ ಜನ ಆಶೀರ್ವಾದ ಮಾಡಲಿದ್ದಾರೆ’ ಎಂದರು.

ಮಾಜಿ ಮೇಯರ್‌ ಕವಿತಾ ಬಿಜೆಪಿಗೆ ಸೇರ್ಪಡೆ: ಮಂಗಳೂರಿನ ಮಾಜಿ ಮೇಯರ್‌, ಬಿಲ್ಲವ ಸಮುದಾಯದ ಮುಖಂಡೆ ಕವಿತಾ ಸನಿಲ್ ಅವರು ರೋಡ್‌ ಶೋ ಸಂದರ್ಭದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

‘ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ, ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ರಜೆ ನೀಡದೆ ದಾರ್ಷ್ಟ್ಯ ಪ್ರದರ್ಶನ, ನೇಹಾ ಹತ್ಯೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹಸಚಿವ ಜಿ.ಪರಮೇಶ್ವರ ಅವರ ಹೇಳಿಕೆಗಳು ಬೇಸರ ತರಿಸಿವೆ. ರಾಮ ಭಕ್ತೆಯಾಗಿ, ಹಿಂದೂ ಎಂದು ಧೈರ್ಯದಿಂದ ಹೇಳಿಕೊಳ್ಳಲು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದೇನೆ’ ಎಂದು ಕವಿತಾ ಸನಿಲ್ ಹೇಳಿದರು.

‘ರಾಜಕೀಯ ಗುರು ಜನಾರ್ದನ ಪೂಜಾರಿ ಅವರೂ ನನಗೆ ಆಶೀರ್ವಾದ ಮಾಡಿದ್ದಾರೆ. ಪ್ರಧಾನಿ ಅವರ ಆಡಳಿತ ಮೆಚ್ಚಿ ಬಿಜೆಪಿಗೆ ಸೇರುತ್ತಿದ್ದೇನೆ. ಯಾವುದೇ ಫಲಾಪೇಕ್ಷೆ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿಲ್ಲ’ ಎಂದರು.

ಬಂಟ್ವಾಳ ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಗಂಗಾಧರ ಪೂಜಾರಿ ಅವರೂ ಬಿಜೆಪಿಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.