ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯ ವಸತಿಗೃಹ ಕಟ್ಟಡ ಶಿಥಿಲಾವಸ್ಥೆ ತಲುಪಿದೆ
ಉಪ್ಪಿನಂಗಡಿ: ಇಲ್ಲಿನ ಆದರ್ಶ ನಗರದ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವಸತಿಗೃಹವು ನಿರ್ವಹಣೆ ಕೊರತೆಯಿಂದ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಗ್ರಾಮ ಪಂಚಾಯಿತಿ ಆಡಳಿತದ ಇಚ್ಛಾಶಕ್ತಿಯ ಕೊರತೆಯಿಂದ ಸಾರ್ವಜನಿಕ ಆಸ್ತಿಯೊಂದು ಧರೆಗುರುಳುವ ದಿನಗಳನ್ನು ಎದುರು ನೋಡುತ್ತಿದೆ.
ಸುಮಾರು 25 ವರ್ಷದ ಹಿಂದೆ ಗ್ರಾಮ ಪಂಚಾಯಿತಿಗೆ ಸಂಪನ್ಮೂಲ ಭರಿಸುವ ಉದ್ದೇಶದೊಂದಿಗೆ ಈ ವಸತಿ ಗೃಹ ನಿರ್ಮಿಸಲಾಗಿತ್ತು. ಒಂದೇ ಹಾಲ್‌ನಂತಿರುವ ಈ ಹೆಂಚಿನ ಕಟ್ಟಡದಲ್ಲಿ ವಸತಿಗೆ ಯೋಗ್ಯವಾದ ಐದು ಮನೆಗಳಿದ್ದವು. ಮೂಲ ಸೌಕರ್ಯ ಹೊಂದಿದ್ದ ಹಾಗೂ ಕಡಿಮೆ ಬಾಡಿಗೆಯ ಕಾರಣಕ್ಕೆ ಇಲ್ಲಿ ಸರ್ಕಾರಿ ನೌಕರರು, ಶಿಕ್ಷಕರು, ಮನೆಯಿಲ್ಲದವರು ಬಾಡಿಗೆಇದ್ದರು. ದಿನಕಳೆದಂತೆ ಗ್ರಾಮ ಪಂಚಾಯಿತಿ ಇದರ ನಿರ್ವಹಣೆಗೆ ಮುಂದಾಗದ ಕಾರಣ ಕಟ್ಟಡದ ಚಾವಣಿ ಶಿಥಿಲಾವಸ್ಥೆ ತಲುಪಿ ರೀಪುಗಳು ಮುರಿದು ಹೆಂಚುಗಳು ಬೀಳತೊಡಗಿದವು. ಬಳಿಕ ಇಲ್ಲಿ ಬಾಡಿಗೆಗೆ ಇದ್ದ ಬಹುತೇಕರು ಆ ಕಟ್ಟಡ ತೊರೆದಿದ್ದು, ಒಂದು ಕುಟುಂಬ ಮಾತ್ರ ಈ ಅಪಾಯಕಾರಿಯಾದ ಈ ಕಟ್ಟಡದಲ್ಲೇ ವಾಸವಿದೆ.
‘ಇದೀಗ ಕಟ್ಟಡದ ಚಾವಣಿ ಮುಕ್ಕಾಲು ಭಾಗ ಕುಸಿದಿದ್ದು, ಮಳೆ ನೀರೆಲ್ಲಾ ಕಟ್ಟಡದೊಳಗೆ ಬೀಳುತ್ತಿದೆ. ಮಳೆ-ಗಾಳಿ-ಬಿಸಿಲಿಗೆ ಈ ಕಟ್ಟಡ ಮೈದೆರೆದು ನಿಂತಿದ್ದರಿಂದ ಇದರ ಗೋಡೆಗಳಿಗೂ ಹಾನಿಯಾಗಿ ಕಟ್ಟಡವೇ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಗ್ರಾಮ ಪಂಚಾಯಿತಿ ಗಮನಹರಿಸಿ ಈ ಕಟ್ಟಡವನ್ನು ಉಳಿಸುವ ಕೆಲಸ ಮಾಡಬೇಕು. ಇದು ಸುಸ್ಥಿತಿಯಲ್ಲಿದ್ದರೆ ಗ್ರಾಮ ಪಂಚಾಯಿತಿಗೂ ಆದಾಯದ ಜತೆಗೆ ಮಧ್ಯಮ ವರ್ಗದ ಮಂದಿಗೆ ಬಾಡಿಗೆಗೆ ವಸತಿ ಸಿಕ್ಕಿದಂತಾಗುತ್ತದೆ’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಅಪಾಯಕಾರಿ ಕಟ್ಟಡದಲ್ಲಿ ಕುಟುಂಬವೊಂದು ವಾಸ್ತವ್ಯ ಇರುವುದು ಗಮನಕ್ಕೆ ಬಂದ ಬಳಿಕ ಸ್ಥಳಕ್ಕೆ ತೆರಳಿ ಮನೆ ಖಾಲಿ ಮಾಡುವಂತೆ ಮೌಖಿಕವಾಗಿ ಸೂಚಿಸಿದ್ದೇನೆ. ಮುಂದೆ ನೋಟೀಸ್ ನೀಡಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ವಸತಿಗೃಹ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಗಮನಕ್ಕೆ ತಂದು ದುರಸ್ತಿಗೆ ಅನುದಾನ ನೀಡುವಂತೆ ಕೇಳಿದ್ದೇನೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅನುದಾನ ಬಂದ ಕೂಡಲೇ ದುರಸ್ತಿಗೆ ಕ್ರಮ ಕೈಕೊಳ್ಳಲಾಗುವುದು.– ಸುಜಾತ ರೈ ಅಲಿಮಾರ್, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಆಟಿಕೆಗಳು, ಪೀಠೋಪಕರಣ ಏನಾದವು?
ಕಟ್ಟಡ ಅಪಾಯಕಾರಿಯಾಗಿದ್ದರೂ ಇದರ ಒಂದು ಕೋಣೆಯ ಚಾವಣಿಯನ್ನು ಗ್ರಾಮ ಪಂಚಾಯಿತಿ ದುರಸ್ತಿ ಮಾಡಿ ಕೂಸಿನ ಮನೆಗಾಗಿ ಬಳಕೆ ಮಾಡಿತ್ತು. 2024ರ ಜನವರಿ ತಿಂಗಳಲ್ಲಿ ಕೂಸಿನ ಮನೆಯೂ ಉದ್ಘಾಟನೆಗೊಂಡಿತು. ಕೂಸಿನ ಮನೆಗೆ ಬರುವ ಮಕ್ಕಳಿಗೆ ಆಡಲೆಂದು ಸರ್ಕಾರ ಸರ್ಕಾರದ ಅನುದಾನದಲ್ಲಿ ಆಟಿಕೆಗಳನ್ನು ಖರೀದಿಸಲಾಗಿತ್ತು. ಕೆಲ ದಾನಿಗಳು ಕಪಾಟು, ಕುರ್ಚಿ, ಫ್ಯಾನ್ ಹೀಗೆಲ್ಲಾ ಕೊಡುಗೆಗಳನ್ನು ನೀಡಿದ್ದರು. ಆದರೆ ಒಂದೆರಡು ತಿಂಗಳಲ್ಲೇ ಕೂಸಿನ ಮನೆ ಬಂದ್ ಮಾಡಿ ಬೀಗ ಹಾಕಲಾಗಿದೆ. ಅಲ್ಲಿಗೆ ನೀಡಲಾದ ಸಾವಿರಾರು ರೂಪಾಯಿಯ ಆಟಿಕೆಗಳು, ದಾನಿಗಳು ಕೊಟ್ಟ ಕೊಡುಗೆಗಳು ಏನಾದವೂ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರಲಾರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.