ADVERTISEMENT

ಉಪ್ಪಿನಂಗಡಿ: ಹರಿವು ನಿಲ್ಲಿಸಿದ ಅನೇತ್ರಾವತಿ

ಸಿದ್ದಿಕ್ ನೀರಾಜೆ
Published 20 ಏಪ್ರಿಲ್ 2023, 4:44 IST
Last Updated 20 ಏಪ್ರಿಲ್ 2023, 4:44 IST
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಬತ್ತಿ ಹೋಗಿದ್ದು, ಹರಿವು ನಿಂತಿದೆ
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಬತ್ತಿ ಹೋಗಿದ್ದು, ಹರಿವು ನಿಂತಿದೆ   

ಉಪ್ಪಿನಂಗಡಿ: ಜಿಲ್ಲೆಯ ಪ್ರಮುಖ ಜೀವ ನದಿ ನೇತ್ರಾವತಿ ಬಿಸಿಲ ಧಗೆಗೆ ಸಂಪೂರ್ಣವಾಗಿ ಸೊರಗಿ ಹೋಗಿದ್ದು, ಉಪ್ಪಿನಂಗಡಿಯಲ್ಲಿ ತನ್ನ ಹರಿವು ನಿಲ್ಲಿಸಿದ್ದಾಳೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.

ದಿನೇ ದಿನೇ ಬಿಸಿಲ ಧಗೆ ಏರು ತ್ತಿದ್ದಂತೆ, ಅಂತರ್ಜಲ ಕುಸಿತವಾಗುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗುತ್ತಲೇ ಇತ್ತು.

ಮೂರ್ನಾಲ್ಕು ದಿನಗಳಿಂದ ತೇವಾಂಶ ಸಂಪೂರ್ಣ ಕಡಿಮೆಯಾಗತೊಡಗಿ ದೇವಸ್ಥಾನದ ಎದುರಿನಲ್ಲಿ ಹರಿವು ನಿಂತಿದೆ. ಸನಿಹದಲ್ಲೇ ಕುಮಾರಧಾರಾ ನದಿಯು ಸಂಗಮಿಸಿದ ಬಳಿಕ ನೇತ್ರಾವತಿ ಮತ್ತೆ ಹರಿಯುತ್ತಾಳಾದರೂ, ಕುಮಾರಧಾರಾ ನದಿ ಸಂಗಮಿಸುವ ಮುನ್ನವೇ ನೇತ್ರಾವತಿ ನದಿಯ ನೀರು ಬತ್ತಿ ಹೋಗಿ ನದಿ ಬರಡಾದಂತಾಗಿದೆ.

ADVERTISEMENT

ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ನೀರಿನ ಹರಿವು ಕಡಿಮೆಯಾಗಿತ್ತು. ಈಗ ಮತ್ತೆ ಅದೇ ಸ್ಥಿತಿ ಮರುಕಳಿಸಿದೆ. ಹಿಂದಿನ ಮೂರು ವರ್ಷಗಳಲ್ಲಿ, ಜನವರಿಯಿಂದ ಆರಂಭಗೊಂಡು ಪ್ರತಿ ತಿಂಗಳು ಆಗಾಗ ಮಳೆ
ಆಗಿದ್ದಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ವರ್ಷ ಈ ಭಾಗದಲ್ಲಿ ಮಳೆ ಆಗದೇ ಇರುವುದರಿಂದಾಗಿ ಕುಡಿಯುವ ನೀರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಉಪ್ಪಿನಂಗಡಿ ಗಯಾಪದ, ದಕ್ಷಿಣಕಾಶಿ ಎಂದೇ ಪ್ರತೀತಿ ಪಡೆದಿರುವು ದರಿಂದ ಆಸ್ತಿಕರು ನೇತ್ರಾವತಿ ಕುಮಾರ ಧಾರಾ ನದಿ ಸಂಗಮ ಸ್ಥಳದಲ್ಲಿ ಗತಿಸಿದ ಬಂಧುಗಳ ಅಸ್ಥಿ ವಿಸರ್ಜನೆ ಮಾಡಿ ಪಿಂಡ ಪ್ರಧಾನಾದಿ ಕಾರ್ಯಗಳನ್ನು ನೆರವೇರಿಸಿದ ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ನದಿ ಬತ್ತಿ ಹೋದ ಕಾರಣಕ್ಕೆ ಪುಣ್ಯ ತೀರ್ಥ ಸ್ನಾನಕ್ಕೆ ತೊಡಕು ಉಂಟಾಗಿದೆ.

ತಾತ್ಕಾಲಿಕ ವ್ಯವಸ್ಥೆ: ಕುಮಾರಧಾರಾ ನದಿ ಸಂಗಮಿಸಿದ ಬಳಿಕ ಸ್ನಾನ ಮಾಡುವ ಅವಕಾಶವಿದೆಯಾದರೂ ಈ ಸ್ಥಳವು ಅಪಾಯಕಾರಿ ಆಗಿರುವುದರಿಂದ ಭಕ್ತರ ಅನುಕೂಲತೆಗಾಗಿ ಸಂಗಮ ಸ್ಥಳಕ್ಕೆ ಸನಿಹದಲ್ಲಿ ಶೆಡ್
ನಿರ್ಮಿಸಿ ಪುಣ್ಯಸ್ನಾನ ಮಾಡುವುದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.