ADVERTISEMENT

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ: ತಪ್ಪಿತಸ್ಥರನ್ನು ಬೆಂಬಲಿಸುವುದಿಲ್ಲ; ಖಾದರ್

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:38 IST
Last Updated 9 ಮೇ 2025, 14:38 IST
ಯು.ಟಿ.ಖಾದರ್ 
ಯು.ಟಿ.ಖಾದರ್    

ಮಂಗಳೂರು: ‘ತಪ್ಪು ಮಾಡಿದವರನ್ನು ಬೆಂಬಲಿಸುವ ಸ್ವಭಾವ ನನ್ನದಲ್ಲ ಎಂಬುದು ಜನರಿಗೆ ಗೊತ್ತಿದೆ. ಜಿಲ್ಲೆಯಲ್ಲಿ ಉದ್ವೇಗದ ವಾತಾವರಣ ಕಡಿಮೆಯಾಗಿ, ಸೋದರತೆಯ ವಾತಾವರಣ ಸೃಷ್ಟಿಯಾಗಲಿ ಎಂಬ ಉದ್ದೇಶದಿಂದ ನನಗೆ ಸಿಕ್ಕ ಮಾಹಿತಿಯನ್ನು ಜನರೆದುರು ಇಟ್ಟಿದ್ದೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಸುರತ್ಕಲ್‌ನಲ್ಲಿ ಈ ಹಿಂದೆ ಹತ್ಯೆಯಾಗಿದ್ದ ಫಾಝಿಲ್ ಕುಟುಂಬದವರ ಪಾತ್ರ ಇಲ್ಲ ಎಂದು ಯು.ಟಿ. ಖಾದರ್‌ ಹೇಳಿಕೆ ನೀಡಿದ್ದರು. ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಫಾಝಿಲ್ ಸಹೋದರನನ್ನೂ ಪೊಲೀಸರು ಬಂಧಿಸಿದ್ದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್‌, ‘ಸುಹಾಸ್ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.  ಮುಂದೆ ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯದ ರೀತಿಯಲ್ಲಿ ಕ್ರಮವಾಗಬೇಕು’ ಎಂದರು.

ADVERTISEMENT

ಸುಹಾಸ್ ಹತ್ಯೆ ಪ್ರಕರಣದ ಆರೋಪಿಗೆ ಕೆಲಸ ನೀಡಿದ್ದ ಕಳಸದ ಹೋಟೆಲ್ ಉದ್ಯಮಿಯೊಬ್ಬರ ಜೊತೆ ಯು.ಟಿ.ಖಾದರ್ ಅವರಿಗೆ ಸಂಪರ್ಕ ಇದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಆರೋಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇಂತಹ ಆರೋಪಗಳು ಇದೇ ಮೊದಲೇನಲ್ಲ. ರಾಜಕೀಯ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅನೇಕರು ಕಾರ್ಯಕ್ರಮಗಳಿಗೆ ಆಹ್ವಾನ ಕೊಡುತ್ತಾರೆ. ಅವಕಾಶ ಇದ್ದಾಗ ಹೋಗುತ್ತೇನೆ. ಕಳಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರಲಿಲ್ಲ’ ಎಂದರು.

ಸ್ಪೀಕರ್‌ಗಳ ಸಮಾವೇಶ

ಕಾಮನ್‌ವೆಲ್ತ್ ಸಂಸದೀಯ ಸಂಘದ ಅಖಿಲ‌ ಭಾರತ ಮಟ್ಟದ ಸ್ಪೀಕರ್‌ಗಳ ಸಮಾವೇಶವನ್ನು ಸೆಪ್ಟೆಂಬರ್ 8ರಿಂದ 10ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಪ್ರಥಮ ಬಾರಿಗೆ ಕರ್ನಾಟಕಕ್ಕೆ ಈ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ದೊರೆತಿದೆ ಎಂದು ಖಾದರ್ ಹೇಳಿದರು‌. ಸೆಪ್ಟೆಂಬರ್ 11ರಂದು ಸಮ್ಮೇಳನದಲ್ಲಿ ಭಾಗವಹಿಸುವ ಸ್ಪೀಕರ್‌ಗಳಿಗೆ ರಾಜ್ಯ ಪ್ರವಾಸಕ್ಕೆ ಕರೆದೊಯ್ಯಲು ಯೋಚಿಸಲಾಗಿದೆ. ಮೈಸೂರು ಮಂಗಳೂರು ಹಾಗೂ ಬೇಲೂರು- ಹಳೆಬೀಡು ಈ ಮೂರು ಪ್ರವಾಸಿ ತಾಣಗಳಲ್ಲಿ ಯಾವುದಾದರೂ ಒಂದು ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದರು. ಸೆಪ್ಟೆಂಬರ್ 8ರಂದು ಸಂಜೆ 6.30ಕ್ಕೆ ವಿಧಾನ ಸೌಧದಲ್ಲಿ ಲೋಕಸಭೆ ಸ್ಪೀಕರ್ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಚಾಲನೆ ನೀಡುವರು. ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಶಾಸಕರನ್ನು ಆಹ್ವಾನಿಸಲಾಗುವುದು. ನಂತರದ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಮಾತ್ರ ಭಾಗವಹಿಸುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.