ADVERTISEMENT

ಹೆದ್ದಾರಿ ಬದಿ ಕಸ: ನಿಗಾಕ್ಕೆ ತಂಡ ರಚನೆ

ರಸ್ತೆ ಬದಿಯಲ್ಲಿ ನಿಂತು ಜಾಗೃತಿ ಮೂಡಿಸಲಿರುವ ಸ್ವಯಂ ಸೇವಕರು

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:20 IST
Last Updated 14 ಮೇ 2025, 7:20 IST
ಸ್ವಚ್ಛತಾ ಅಭಿಯಾನದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೊಡ ಸಭೆ ನಡೆಸಿದರು
ಸ್ವಚ್ಛತಾ ಅಭಿಯಾನದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೊಡ ಸಭೆ ನಡೆಸಿದರು   

ಮಂಗಳೂರು: ಹೆದ್ದಾರಿ ಬದಿಯಲ್ಲಿ ಕಸ ಬೀಳುವುದನ್ನು ತಡೆಗಟ್ಟಲು ‘ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು; ನಮ್ಮೊಂದಿಗೆ ನೀವು’ ಅಭಿಯಾನವು ಜಿಲ್ಲಾ ಪಂಚಾಯಿತಿ ಮಾರ್ಗದರ್ಶನದಲ್ಲಿ ನಡೆಯಲಿದೆ.

ಪ್ರಾಯೋಗಿಕ ಯೋಜನೆಯಾಗಿ ಮಂಗಳೂರು ತಾಲ್ಲೂಕಿನ ಅಡ್ಯಾರ್, ಬಂಟ್ವಾಳ ತಾಲ್ಲೂಕಿನ ತುಂಬೆ, ಪುದು ಹಾಗೂ ಕಳ್ಳಿಗೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪಂಚಾಯಿತಿಗಳ ಪರಿಸರ ಆಸಕ್ತ ಸ್ವಯಂ ಸೇವಕರು ಹಾಗೂ ಹಸಿರು ದಳದ ಕಾರ್ಯಕರ್ತರು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 73ರ ಬದಿಯಲ್ಲಿ ನಿಂತು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಅಭಿಯಾನದ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೊಡ ಮಂಗಳವಾರ ಇಲ್ಲಿ ಸಭೆ ನಡೆಸಿದರು. ಅಭಿಯಾನಕ್ಕೆ ನಾಲ್ಕು ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ  ಬೀಳುವ ತ್ಯಾಜ್ಯ ತಡೆಗಟ್ಟಲು ಗಸ್ತು ಪಡೆ ಹಾಗೂ ಬ್ಲ್ಯಾಕ್ ಸ್ಪಾಟ್‍ಗಳಲ್ಲಿ ನಿಲ್ಲಲು 5 ಜನರ ತಂಡವನ್ನು ರಚಿಸಲು ಸಿದ್ಧತೆ ನಡೆಸಲಾಗಿದೆ. ಪರಿಸರ ಕಾಳಜಿಯ ಸ್ವಯಂ ಸೇವಕರು ಬ್ಲ್ಯಾಕ್ ಸ್ಪಾಟ್‍ನಲ್ಲಿ ನಿಲ್ಲಲು ಮುಂದೆ ಬರಬಹುದು ಎಂದರು.

ADVERTISEMENT

ಈ ಅಭಿಯಾನವು ಮೂರು ತಿಂಗಳಿನವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಜನರಿಗೆ ತಿಳಿವಳಿಕೆ ನೀಡಬೇಕು. ಅಕ್ರಮವಾಗಿ ಕಸ ಹಾಕುವುದು ಪುನರಾವರ್ತನೆಯಾದರೆ ದಂಡ ವಿಧಿಸಬೇಕು ಎಂದು ಹೇಳಿದರು.

ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳ ಕಸ ನಿರ್ವಹಣೆಗೆ ತೊಡಗುವ ಮೊದಲು ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ಪ್ರತಿ ಮನೆಯಲ್ಲಿ ಕಸ ವಿಂಗಡಿಸಿ ಕೊಡುವಂತೆ ಕ್ರಮವಹಿಸಬೇಕಾಗಿದೆ. ಶೇ 100 ಮನೆಗಳಿಂದ ಸರಿಯಾಗಿ ಕಸ ಸಂಗ್ರಹ ಆದಾಗ ಮಾತ್ರ ರಸ್ತೆ ಬದಿಗಳಲ್ಲಿ ಕಸ ಬೀಳುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದರು.

ಕಳ್ಳಿಗೆ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ, ಅಡ್ಯಾರ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ತುಂಬೆ ಪಂಚಾಯಿತಿ ಉಪಾಧ್ಯಕ್ಷ ಗಣೇಶ್, ಹಸಿರು ದಳದ ನಾಗರಾಜ್ ಆರ್. ಅಂಚನ್, ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ಸಮಾಲೋಚಕರು ಉಪಸ್ಥಿತರಿದ್ದರು.
 

ಕಾರ್ಯಾನುಷ್ಠಾನ ಹೇಗೆ?   

ಕಸ ಬೀಳುವ ಪ್ರದೇಶ ಗುರುತಿಸಿ ಆ ಪ್ರದೇಶದಲ್ಲಿ ಬೆಳಿಗ್ಗೆ 5ರಿಂದ 8 ಗಂಟೆಯವರಗೆ ಹಾಗೂ ಸಂಜೆ 6ರಿಂದ 9 ಗಂಟೆಯವರೆಗೆ ಪರಿಸರ ಮತ್ತು ಸ್ವಚ್ಛತೆಯಲ್ಲಿ ಆಸಕ್ತಿ ಇರುವ ಐವರು ಜನ ಸ್ವಯಂ ಸೇವಕರನ್ನು ನಿಲ್ಲಿಸಲಾಗುತ್ತದೆ. ಬೆಳಗಿನ ಅವಧಿಯಲ್ಲಿ 20 ಜನರು ಸಂಜೆಯ ಅವಧಿಯಲ್ಲಿ 20 ಜನರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಕಸ ಬಿಸಾಡುವರನ್ನು ಗುರುತಿಸಿ ಅವರಿಗೆ ಮನವರಿಕೆ ಮಾಡಲಾಗುತ್ತದೆ. ಜಾಗೃತಿ ಮೂಡಿಸಲು ಮೈಕ್ ಮೂಲಕ ವಾಹನದಲ್ಲಿ ಪ್ರಚಾರ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.