
ಪುತ್ತೂರು: ನ್ಯಾಯಾಲಯಗಳು ನ್ಯಾಯ ಮಂದಿರ ಇದ್ದಂತೆ. ನ್ಯಾಯಾಲಯದಲ್ಲಿ ಕೆಲಸ ಮಾಡುವವರು ತಮ್ಮ ನ್ಯಾಯ ಸಮ್ಮತ ನಡವಳಿಕೆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಹಾಗಾದರೆ ಮಾತ್ರ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ.ಇದನ್ನು ಯುವ ವಕೀಲರು ಅರ್ಥ ಮಾಡಿಕೊಳ್ಳಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು.
ನಗರದ ಹೊರವಲಯದ ಬನ್ನೂರು ಗ್ರಾಮದ ಆನೆಮಜಲು ಎಂಬಲ್ಲಿ 4.80 ಎಕರೆ ಜಾಗದಲ್ಲಿ ₹51.9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ನ್ಯಾಯಾಲಯ ಸಂಕೀರ್ಣವನ್ನು ಶನಿವಾರ ಅವರು ಉದ್ಘಾಟಿಸಿ ಮಾತನಾಡಿದರು.
ಕೆಲವೊಮ್ಮೆ ನಮಗೆ ಇಡೀ ಲೋಕವೇ ಸರಿಯಿಲ್ಲ ಎಂದು ಕಾಣಿಸುವುದುಂಟು. ಇದನ್ನು ಹೇಗೆ ಸರಿ ಮಾಡಲು ಸಾಧ್ಯ ಎಂಬ ಚಿಂತೆಯೂ ಕಾಡುವುದುಂಟು. ಮೊದಲು ನಮ್ಮನ್ನು ನಾವು ಸರಿ ಮಾಡಿಕೊಳ್ಳಬೇಕು. ನಮ್ಮ ನಡವಳಿಕೆ ಮೌಲ್ಯಯುತವಾಗಿದ್ದಾಗ ಇತರಿಗೆ ಆದರ್ಶ ನೀಡಲು ಸಾಧ್ಯ ಎಂದು ಅವರು ಹೇಳಿದರು.
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ಕರ್ನಾಟಕದಾದ್ಯಂತ ನ್ಯಾಯಾಲಯ ಕಟ್ಟಡಗಳ ನವೀಕರಣಕ್ಕೆ ಹೈಕೋರ್ಟ್ ಬದ್ಧವಾಗಿದೆ. ಕೇವಲ ನ್ಯಾಯಾಲಯದ ಮೂಲ ಸೌಕರ್ಯ ಅಭಿವೃದ್ಧಿಯಾದರೆ ಮಾತ್ರ ನ್ಯಾಯದಾನ ಖಾತ್ರಿಯಾಗುವುದಿಲ್ಲ. ಬದಲಾಗಿ ಇಲ್ಲಿ ಕೆಲಸ ಮಾಡುವವರು ಹೊಂದಿರುವ ಸಾಮಾಜಿಕ ಬದ್ಧತೆ ಮತ್ತು ದೂರದೃಷ್ಟಿಯು ನ್ಯಾಯದಾನವನ್ನು ಖಾತ್ರಿಪಡಿಸುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನ್ಯಾಯಾಲಯಗಳಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ ನ್ಯಾಯಾಧೀಶರು ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಶೇ 30 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಸಿಕ್ಕಿದೆ. ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ₹ 60 ಕೋಟಿ ವೆಚ್ಚದಲ್ಲಿ ಬ್ಲಾಕ್ ಎ ನಿರ್ಮಾಣ ನಡೆಯುತ್ತದೆ. ಬೆಳ್ತಂಗಡಿಯಲ್ಲಿ ₹9 ಕೋಟಿ ವೆಚ್ಚದ ನ್ಯಾಯಾಲಯ ಕಟ್ಟಡಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಮಾತನಾಡಿ, ಮಧ್ಯಸ್ಥಿಕೆ ಮತ್ತು ಲೋಕ ಅದಾಲತ್‌ಗಳ ಮೂಲಕ ಆದಷ್ಟು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥ ಮಾಡುವಲ್ಲಿ ವಕೀಲರು ಹೆಚ್ಚಿನ ಶ್ರಮ ವಹಿಸಬೇಕು ಎಂದರು.
ಶಾಸಕ ಅಶೋಕ್ ರೈ, ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು. ರಾಜ್ಯಪಾಲ ಅಬ್ದುಲ್ ನಜೀರ್, ಹೈಕೋಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ರೈ ಅವರನ್ನು ಸನ್ಮಾನಿಸಲಾಯಿತು.
ಹೈಕೋರ್ಟ್ ಮಹಾ ವಿಲೇಖಾಕಾರಿ ಕೆ.ಎಸ್.ಭರತ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಗೋಕುಲ್ ದಾಸ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ.ಹೆಗ್ಡೆ, ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ, ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ ಹಾಜರಿದ್ದರು.
ಜಿಲ್ಲಾ ನ್ಯಾಯಾಧೀಶ ಬಸವರಾಜ್ ಸ್ವಾಗತಿಸಿದರು. ಪುತ್ತೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ವಂದಿಸಿದರು. ವಕೀಲ ಕುಂಬ್ರ ದುರ್ಗಾಪ್ರಸಾದ ರೈ ನಿರೂಪಿಸಿದರು.
ಶಾಸಕರ ಹೊಗಳಿದ ರಾಜ್ಯಪಾಲ!
ಅಬ್ದುಲ್ ನಜೀರ್ ತಮ್ಮ ಭಾಷಣದಲ್ಲಿ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಕೊಂಡಾಡಿದರು. ಇಂಗ್ಲಿಷ್ ತುಳು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ ಅವರು ‘ಅಪ್ಕೊಕೋರ್ಸ್ ಅವರ್ ಡೈನಾಮಿಕ್ ಎಂಎಲ್ಎ ಸರ್ ಇರ್ನ ಕಾಲೊಡು ಯಾನೊಂಜಿ ಪನ್ಪೆ.. ಸರ್ ನಿಮ್ಮ ಟೈಮಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಿ ಬಿಡ್ತದೆ’ ಎಂದು ಹೇಳಿದಾಗ ಸಭೆಯಲ್ಲಿ ಕರತಾಡನ ವ್ಯಕ್ತವಾಯಿತು. ಪುತ್ತೂರು ಬಹಳ ಮಹತ್ವದ ಊರು. ಇಲ್ಲಿನ ಮಹಾಲಿಂಗೇಶ್ವರ ದೇಗುಲ ಪಂಚಮುಖಿ ಆಂಜನೇಯ ದೇಗುಲ ಪ್ರಸಿದ್ಧವಾದುದು. ತುಳುನಾಡಿನ ಕಾರಣಿಕ ಅವಳಿ ವೀರರಾದ ಕೋಟಿ ಚೆನ್ನಯರ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವರ ಕುರಿತ ಸಿನಿಮಾ ನೋಡಿದ್ದೇವೆ. ಕೋಟಿ ಚೆನ್ನಯರು ಪುತ್ತೂರಿನವರು ಎಂಬುದು ಹೆಮ್ಮೆ ಎಂದು ಅಬ್ದುಲ್ ನಜೀರ್ ಹೇಳಿದರು. ಮೂರು ಬೇಡಿಕೆ ಸಲ್ಲಿಕೆ ನೂತನ ನ್ಯಾಯಾಲಯ ಸಂಪರ್ಕಿಸುವ ರಸ್ತೆಗೆ ಬೆನೆಗಲ್ ನರಸಿಂಗ ರಾವ್ ಸಂವಿಧಾನ ಪಥ ಎಂಬ ನಾಮಕರಣ ಮಾಡುವ ಪ್ರಕ್ರಿಯೆ ಶೀಘ್ರ ಪೂರೈಸಬೇಕು. ಬೆಳ್ತಂಗಡಿ ನ್ಯಾಯಾಲಯ ಅಪೀಲ್ ಕೋರ್ಟ್ ಆಗಿ ಇನ್ನು ಮುಂದೆ ಮಂಗಳೂರು ಬದಲು ಪುತ್ತೂರು ನ್ಯಾಯಾಲಯವನ್ನು ಪರಿಗಣಿಸಬೇಕು. ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ಮತ್ತು ಬಾರ್ ಅಸೋಸಿಯೇಶನ್ ಕಟ್ಟಡದ ಮಧ್ಯ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಗಳನ್ನು ಪುತ್ತೂರು ವಕೀಲರ ಸಂಘದ ವತಿಯಿಂದ ಅಧ್ಯಕ್ಷ ಜಗನ್ನಾಥ ರೈ ಮಂಡಿಸಿದರು.
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ
ಕರಾವಳಿ ಮತ್ತು ಮಲೆನಾಡಿನ ಜನರಿಗೆ ಅನುಕೂಲವಾಗುವಂತೆ ರಾಜ್ಯ ಹೈಕೋರ್ಟ್‌ನ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂದು ಸಮಾರಂಭದಲ್ಲಿ ಒತ್ತಾಯಿಸಲಾಯಿತು. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಬ್ದುಲ್ ನಜೀರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್. ಟಿ.ನರೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಶಾಸಕ ಅಶೋಕ್ ರೈ ಅವರು ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ತಮ್ಮ ಭಾಷಣದಲ್ಲಿಯೂ ಇದೇ ವಿಚಾರವನ್ನು ಪ್ರತಿಪಾದಿಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೂಡ ತಮ್ಮ ಭಾಷಣದಲ್ಲಿ ಈ ಬೇಡಿಕೆಗೆ ಸಹಮತ ಸೂಚಿಸಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಅಗತ್ಯವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.