ADVERTISEMENT

ಸುರತ್ಕಲ್‌–ಬಿ.ಸಿ.ರೋಡ್‌ ಹೆದ್ದಾರಿ ಎನ್‌ಎಚ್‌ಎಐಗೆ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:11 IST
Last Updated 12 ನವೆಂಬರ್ 2025, 5:11 IST
ಮಂಗಳೂರಿನಲ್ಲಿ ಮಂಗಳವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ  ಮಾತನಾಡಿದರು. ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕಿ ಆಶಾ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರವಾಡೆ ವಿನಾಯಕ ಕಾರ್ಬಾರಿ, ಜಿಲ್ಲಾಧಿಕಾರಿ ದರ್ಶನ್‌ ಎಚ್.ವಿ. ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಮಂಗಳವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ  ಮಾತನಾಡಿದರು. ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕಿ ಆಶಾ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರವಾಡೆ ವಿನಾಯಕ ಕಾರ್ಬಾರಿ, ಜಿಲ್ಲಾಧಿಕಾರಿ ದರ್ಶನ್‌ ಎಚ್.ವಿ. ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: ಸುರತ್ಕಲ್–ಮಂಗಳೂರು– ಬಿ.ಸಿ.ರೋಡ್‌ ರಾಷ್ಟ್ರೀಯ ಹೆದ್ದಾರಿಯು ಪ್ರಸ್ತುತ ನವಮಂಗಳೂರು ಬಂದರು ರಸ್ತೆ ಕಂಪನಿ ಅಧೀನದಲ್ಲಿದ್ದು, ಇದರ ನಿರ್ವಹಣೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುದಾನ ಒದಗಿಸುತ್ತಿಲ್ಲ. ಈ ಹೆದ್ದಾರಿ ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರವಾಗಲಿದ್ದು, ನಿರ್ವಹಣೆ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು. 

ಇಲ್ಲಿ ಮಂಗಳವಾರ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಹೆದ್ದಾರಿಯ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಸರಿಪಡಿಸಿ ಚತುಷ್ಫಥವನ್ನಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ತಯಾರಿಸುವ ಏಜೆನ್ಸಿ ಗೊತ್ತುಪಡಿಸಲು ಟೆಂಡರ್ ಕರೆಯಲಾಗಿದೆ. ಇದರ ಅಭಿವೃದ್ಧಿಗೆ ಎಲ್ಲ ಪಾಲುದಾರರ ಜೊತೆ ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ’ ಎಂದರು.  

ADVERTISEMENT

ಕೂಳೂರು ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕ್ಯಾ.ಚೌಟ, ‘ಇನ್ನೂ ಗುತ್ತಿಗೆದಾರನ ಮೇಲೆ ಏಕೆ ಕ್ರಮವಾಗಿಲ್ಲ’ ಎಂದು ಪ್ರಶ್ನಿಸಿದರು. 

‘ಈ ಸೇತುವೆಯ ಮೂರು ಕಾಂಕ್ರೀಟ್‌ ಕಂಬಗಳು ಪೂರ್ಣವಾಗಿದ್ದು, ಎರಡು ಕಂಬಗಳು ಇನ್ನಷ್ಟೇ ನಿರ್ಮಾಣವಾಗಬೇಕಿವೆ. ಈ ಹಂತದಲ್ಲಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿದರೆ, ಬೇರೆ ಗುತ್ತಿಗೆದಾರರನ್ನು ಹುಡುಕುವುದು ಕಷ್ಟ. ಕಾಮಗಾರಿ ಮುಂದುವರಿಸಲು ಈಗಿನ ಗುತ್ತಿಗೆದಾರ ಒಪ್ಪಿದ್ದಾರೆ. ಈ ಸೇತುವೆಯ 84 ಗರ್ಡರ್‌ಗಳಲ್ಲಿ 50 ಗರ್ಡರ್‌ ಸಿದ್ಧವಾಗಿದ್ದು, ಅವುಗಳನ್ನು ಅಳವಡಿಸುವ ಕಾರ್ಯವನ್ನು ಡಿಸೆಂಬರ್‌ನಲ್ಲಿ ಶುರುಮಾಡುವುದಾಗಿ ತಿಳಿಸಿದ್ದಾರೆ’ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾವೇದ್ ಆಜ್ಮಿ ತಿಳಿಸಿದರು. 

ಈ ಸೇತುವೆಯನ್ನು ಸಂಪರ್ಕಸುವ ರಸ್ತೆ ಕಾಮಗಾರಿಯನ್ನಾದರೂ ಬೇರೆ ಗುತ್ತಿಗೆದಾರರಿಗೆ ವಹಿಸಿ ಎಂದು ಸಂಸದ ಸೂಚಿಸಿದರು.  

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಡ್ಡಹೊಳೆ–ಪೆರಿಯಶಾಂತಿವರೆಗಿನ  15.13 ಕಿ.ಮೀ ಚತುಷ್ಫಥ ಕಾಮಗಾರಿಯಲ್ಲಿ 14.74 ಕಿ.ಮೀ ಪೂರ್ಣಗೊಂಡಿದೆ. ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ 0.39 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆನೆಗಳು ಹೆದ್ದಾರಿಯನ್ನು ದಾಟಲು ಕೆಳ ಸೇತುವೆ ನಿರ್ಮಿಸುವ ಕಾಮಗಾರಿಗೂ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಆಜ್ಮಿ ತಿಳಿಸಿದರು.  

‘ಪೆರಿಯಶಾಂತಿಯಿಂದ ಬಿ.ಸಿ.ರೋಡ್‌ವರೆಗಿನ 48.48 ಕಿ.ಮೀ ಹೆದ್ದಾರಿಯಲ್ಲಿ 43.1 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ 2026ರ ಮಾರ್ಚ್‌ 31ರ ಒಳಗೆ ಪೂರ್ಣಗೊಳ್ಳಲಿದೆ. ನೀರಕಟ್ಟೆಯಲ್ಲಿ ನಿಯಂತ್ರಿತ ಸ್ಫೋಟ ನಡೆಸಿ ಬಂಡೆ ಒಡೆಯುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

‘ಬಂಡೆ ತೆರವು ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಪುತ್ತೂರು ಉಪವಿಭಾಗಾಧಿಕಾರಿ ಮಧ್ಯಪ್ರವೇಶಿಸಬೇಕು’ ಎಂದು ಸಂಸದ ಸಲಹೆ ನೀಡಿದರು.

‘ಸಾಣೂರು– ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಫಥ ಕಾಮಗಾರಿಯಲ್ಲಿ ಕೈಕಂಬದ ರೋಸಮಿಸ್ಟಿಕಾ ಶಾಲೆಯ ಬಳಿಯ 800 ಮೀ ಸೇರಿದಂತೆ ನಾಲ್ಕು ಕಡೆ ಜಾಗದ ವಿವಾದದಿಂದಾಗಿ ಕೆಲಸ ಬಾಕಿ ಇದೆ.  41 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಆಜ್ಮಿ ವಿವರಿಸಿದರು. 

ಈ ಹೆದ್ದಾರಿಯಲ್ಲಿ ಕೈಕಂಬ–ಗಂಜಿಮಠದ ನಡುವೆ ಬಳಿ ಟೋಲ್ ಸಂಗ್ರಹಕ್ಕೆ ಶೆಡ್ ನಿರ್ಮಿಸಿದರೂ, ಕಾಮಗಾರಿ ಶೇ 80ರಷ್ಟು ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ತಿಳಿಸಿದರು.

ದಿಶಾ ಸಭೆ: ಗಮನ ಸೆಳೆದ ಅಂಶಗಳು

  • 15 ನಿಮಿಷದವರೆಗೆ ವಿಮಾನನಿಲ್ದಾಣದಲ್ಲಿ ಟ್ಯಾಕ್ಸಿಗೆ ಶುಲ್ಕ ಬೇಡ: ಸಂಸದ ಜಲಜೀವನ್‌ ಅಭಿಯಾನ ಕಾಮಗಾರಿ ಅಪೂರ್ಣ: ಅಸಮಾಧಾನ

  • ಜಂಟಿ ಸರ್ವೆಯಾಗದೆ ಅರಣ್ಯ ಒತ್ತುವರಿದಾರರ ಎಬ್ಬಿಸದಿರಿ: ಶಾಸಕ ಪೂಂಜ 

  • ಇಎಸ್‌ಐ ಆಸ್ಪತ್ರೆ ಒಡಂಬಡಿಕೆ ಸಮಸ್ಯೆ ನೀಗಿಸಲು ಶಾಸಕ ಕಾಮತ್‌ ಒತ್ತಾಯ

  • ಸೇವೆ ಒದಗಿಸದ ಬಸ್‌ ಮಾಲೀಕರ ಪರವಾನಗಿ ರದ್ದು ಮಾಡಲು ಒತ್ತಾಯ

  • ಕಂಡೇವು– ನದಿಗೆ ಶೌಚತ್ಯಾಜ್ಯ ಸೇರಿದರೆ ಪ್ರತಿಭಟನೆ: ಕೋಟ್ಯಾನ್‌

‘ಮಹಾಕಾಳಿಪಡ್ಪು ಕೆಳಸೇತುವೆ ಡಿ 20ರೊಳಗೆ ಪೂರ್ಣ’

ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಡಿ 20ರ ಒಳಗೆ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 66ರಿಂದ ಈ ಮಾರ್ಗದ ಮೂಲಕ ನಗರವನ್ನು ಸಂಪರ್ಕಿಸುವ ರಸ್ತೆಯ ಎರಡು ಪಥಗಳ ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ನಗರದಿಂದ ಹೆದ್ದಾರಿಯತ್ತ ಸಾಗುವ ಎರಡು ಪಥಗಳ ಕಾಂಕ್ರಿಟೀಕರಣ ವಾರದೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಕ್ಯೂರಿಂಗ್‌ಗೆ 20 ದಿನಗಳು ಬೇಕು ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಧಾನ ವ್ಯವಸ್ಥಾಪಕ ಅರುಣ ಪ್ರಭ ತಿಳಿಸಿದರು.  ‘ಈ ರೈಲ್ವೆ ಕೆಳಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಕರಾವಳಿ ವೃತ್ತ–ಮಹಾವೀರ ವೃತ್ತದ (ಪಂಪ್‌ವೆಲ್‌) ನಡುವಿನ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದರು. ರೈಲ್ವೆ ಸಚಿವರೇ ಸೂಚನೆ ನೀಡಿದರು ರೈಲ್ವೆ ಇಲಾಖೆಯ ಸಮನ್ವಯ ಸಭೆ  ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುತ್ತಿಲ್ಲ. ಈ ಬಗ್ಗೆ ಸಚಿವಾಲಯಕ್ಕೆ ದೂರು ನೀಡಬೇಕಾಗುತ್ತದೆ ಎಂದು ಕ್ಯಾ.ಬ್ರಿಜೇಶ್ ಚೌಟ ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.   ಮೂಲ್ಕಿ ರೈಲ್ವೆ ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ 1ರ ಅಭಿವೃದ್ಧಿ ಕಾಮಗಾರಿ  ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಮೂಲ್ಕಿ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಕಾಮಗಾರಿ ವಾರದೊಳಗೆ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಕೆಂಪುಕಲ್ಲು– ದರ ಇಳಿಸದಿದ್ದರೆ ಕ್ರಮ: ಡಿ.ಸಿ  

‘ರಾಜಧನ ಇಳಿಸಿದರೂ ಕೆಂಪುಕಲ್ಲು ದರ ದುಬಾರಿಯಾಗಿಯೇ ಇದೆ. ಜಿಲ್ಲೆಯಲ್ಲಿ ಬಡವರು ಮನೆ ಕಟ್ಟಿಸುವುದು ದುಸ್ತರವಾಗಿದೆ. ಜಿಲ್ಲಾಡಳಿತ ದರ ನಿಯಂತ್ರಣಕ್ಕೆ ಕ್ರಮ ವಹಿಸಬೇಕು’ ಎಂದು ಶಾಸಕರು ಒತ್ತಾಯಿಸಿದರು.   ‘ಹಿಂದೆ ಪ್ರತಿ ಕೆಂಪು ಕಲ್ಲು ₹ 27ಕ್ಕೆ ಸಿಗುತ್ತಿತ್ತು. ಈ ₹ 45ರಿಂದ ₹ 55ರವರೆಗೆ ಹೆಚ್ಚಳವಾಗಿದೆ’ ಎಂದು ಶಾಸಕ ಉಮಾನಾಥ್ ಕೋಟ್ಯಾನ್‌ ದೂರಿದರು. ‘ಬಡವರು ಹಿಂದೆ ₹ 10 ಲಕ್ಷದೊಳಗೆ ಮನೆ ಕಟ್ಟಬಹುದಾಗಿತ್ತು. ಈಗ ಮನೆ ನಿರ್ಮಾಣ ವೆಚ್ಚ ದುಪ್ಪಟ್ಟಾಗಿದೆ’ ಎಂದು ಹರೀಶ್‌ ಪೂಂಜ ಆರೋಪಿಸಿದರು. ‘ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರ ಸಂಘದವರ ಜೊತೆ ಈ ಬಗ್ಗೆ ಈಗಾಗಲೇ  ಚರ್ಚಿಸಿದ್ದೇನೆ.  ಪ್ರತಿ ಟನ್ ಕಂಪುಕಲ್ಲಿನ ರಾಜಧನ ₹ 295ರಿಂದ₹ 100ಕ್ಕೆ ಇಳಿಸಿದ ಬಳಿಕವೂ ದರ ಇಳಿಸಿಲ್ಲ. ಸಾಗಾಟ ವೆಚ್ಚದಿಂದ ದರ ದುಬಾರಿಯಾದಂತೆ ಕಾಣುತ್ತಿದೆ ಎಂಬುದು ಅವರ ವಾದ. ದರ ಇಳಿಸದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಕೆಡಿಪಿ ಸಭೆಗೆ ಮುನ್ನವೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ  ಭರವಸೆ ನೀಡಿದರು. ‘ಮರಳಿನ ಕೊರತೆ ನೀಗಿಸಲು ಕ್ರಮವಹಿಸಲಾಗಿದ್ದು ಜಿಲ್ಲೆಯಾದ್ಯಂತ ಒಟ್ಟು 38 ಹೊಸ ಮರಳು ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ’ ಎಂದರು.  

‘ಗ್ರಾಮೀಣ ಪ್ರದೇಶ: ಕೆಎಸ್‌ಆರ್‌ಟಿಸಿ ಸೇವೆ ಹೆಚ್ಚಿಸಿ’

ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಸೇವೆ ಲಭ್ಯ ಇಲ್ಲದೆ ಶಕ್ತಿ ಯೋಜನೆಯಿಂದ ಜನ ವಂಚಿತರಾಗಿದ್ದಾರೆ. ಪುತ್ತೂರು ವ್ಯಾಪ್ತಿಯಲ್ಲಿ ಹೆಚ್ಚು ಬೇಡಿಕೆ ಇರುವ ಕಡೆಗೆ ಹೊಸ ಬಸ್‌ ಮಾರ್ಗವನ್ನು ಆರಂಭಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಗೆ ಪ್ರಸ್ತಾವ ಸಲ್ಲಿಸಬೇಕು. ಸಾಧ್ಯವಿರುವ ಕಡೆ ಬಸ್‌ಗಳ ಟ್ರಿಪ್ ಹೆಚ್ಚಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.  ಶಕ್ತಿ ಯೋಜನೆ ಆರಂಭವಾದ ಬಲಿಕ ಇದ್ದ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶಾಸಕ ಪೂಂಜ ಆರೋಪಿಸಿದರು.‌ ಇದನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅಲ್ಲಗಳೆದರು.  ಸುಳ್ಯದ ಗ್ರಾಮೀಣ ಪ್ರದೇಶದಲ್ಲಿ ರಾತ್ರಿವರೆಗೆ ಬಸ್‌ ಸೇವೆ ಲಭ್ಯ ಇಲ್ಲ.  ವಿದ್ಯಾರ್ಥಿಗಳು ಶಾಲಾ ಕಾಲೇಜಿನಿಂದ ಮನೆಗೆ ಮರಳಲು ಸಮಸ್ಯೆ ಆಗುತ್ತಿದೆ ಎಂದು ಶಾಸಕಿ ಭಾಗಿರಥಿ ಮುರುಳ್ಯ ಗಮನ ಸೆಳೆದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.