ADVERTISEMENT

ಮಂಗಳೂರು: ₹16 ಲಕ್ಷದ ಜಾಡು ಹಿಡಿದು ಬಂದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 31 ಮೇ 2023, 16:43 IST
Last Updated 31 ಮೇ 2023, 16:43 IST
ಎನ್‌ಐಎ
ಎನ್‌ಐಎ    

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲ್ಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆಯ ಅಬ್ಬಾಸ್ ಅವರ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

‘ಅಬ್ಬಾಸ್‌ ಅವರ ಪುತ್ರ ಅಶ್ರಫ್ ಅವರನ್ನು ಹುಡುಕಿಕೊಂಡು ಎನ್ಐಎ ಅಧಿಕಾರಿಗಳು ಬಂದಿದ್ದರು. ಅಶ್ರಫ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಮೊಬೈಲ್‌ ಮೂಲಕ ಅಶ್ರಫ್‌ನನ್ನು ಸಂಪರ್ಕಿಸಿ, ಅವರ ಬ್ಯಾಂಕ್‌ ಖಾತೆಗೆ ₹ 16 ಲಕ್ಷ ಜಮೆಯಾದ ಬಗ್ಗೆ ಮಾಹಿತಿ ಕೇಳಿದರು. ತಾನು ಈ ಮೊದಲು ವಿಟ್ಲದಲ್ಲಿ ಸೋಫಾ ತಯಾರಿ ಹಾಗೂ ಮಾರಾಟದ ವ್ಯವಹಾರ ಮಾಡುತ್ತಿದ್ದೆ. ಅಲ್ಲಿನ ಜಾಗ ಮಾರಿದ್ದು, ಅದಕ್ಕೆ ಸಂಬಂಧಿಸಿ ₹ 16 ಲಕ್ಷ ತಮ್ಮ ಖಾತೆಗೆ ಜಮೆಯಾಗಿದೆ. ತಾನೀಗ ಕೇರಳದ ಚೆರ್ಕಳದಲ್ಲಿ ವ್ಯವಹಾರ ನಡೆಸುತ್ತಿದ್ದು, ವಿಚಾರಣೆಗೆ ಕರೆದಾಗ ಹಾಜರಾಗುವುದಾಗಿ ಅಶ್ರಫ್‌ ತಿಳಿಸಿದರು. ಬಳಿಕ ಎನ್ಐಎ ಅಧಿಕಾರಿಗಳು ಅಬ್ಬಾಸ್‌ ಅವರ ಮನೆಯನ್ನು ಪರಿಶೀಲನೆ ನಡೆಸಿ ನಿರ್ಗಮಿಸಿದರು’ ಸ್ಥಳೀಯ ಮೂಲಗಳು ತಿಳಿಸಿವೆ.

ಬೆಳ್ತಂಗಡಿ ತಾಲ್ಲೂಕಿನ ಕುಪ್ಪೆಟ್ಟಿಯ ಹುಣ್ಸೆಕಟ್ಟೆಯಲ್ಲಿ ಬಾಡಿಗೆಗಿರುವ ಹುಸೈನ್ ಎಂಬುವರ ಮನೆಗೂ ಎನ್ಐಎ ತಂಡ ದಾಳಿ ನಡೆಸಿದೆ. ಹುಸೈನ್‌ ಅವರ ಪುತ್ರ ಮುಹಮ್ಮದ್ ಕೈಫ್ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಜಮೆಯಾದ ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಿದರು.

ADVERTISEMENT

‘ನನ್ನ ಹೆಸರಿನಲ್ಲಿ ಅಂತಹ ಬ್ಯಾಂಕ್‌ ಖಾತೆ ಇರುವುದೇ ನನಗೆ ಗೊತ್ತಿಲ್ಲ. ಅದಕ್ಕೆ ಹಣ ಬರುತ್ತಿರುವುದಾಗಲಿ, ಆ ಖಾತೆಯಿಂದ ಹಣ ಪಡೆಯುವುದಾಗಲಿ ನನಗೆ ತಿಳಿದಿಲ್ಲ. ನನ್ನ ಖಾತೆ ಬೇರೆಯೇ ಇದೆ’ ಎಂದು ಮುಹಮ್ಮದ್ ಕೈಫ್ ಉತ್ತರಿಸಿದರು. ಎನ್ಐಎ ತಂಡ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲೇ ಆ ಖಾತೆಗೆ ₹ 3 ಲಕ್ಷ ಜಮೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಹೆಚ್ಚಿನ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ಎನ್‌ಐಎ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.