ADVERTISEMENT

ಎಸ್‌ಡಿಪಿಐ ಮುಖಂಡ ರಿಯಾಜ್‌ ಪರಂಗಿಪೇಟೆ ಮನೆ ಮೇಲೆ ಎನ್‌ಐಎ ದಾಳಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 12:49 IST
Last Updated 8 ಸೆಪ್ಟೆಂಬರ್ 2022, 12:49 IST
ರಿಯಾಜ್‌ ಫರಂಗಿಪೇಟೆ
ರಿಯಾಜ್‌ ಫರಂಗಿಪೇಟೆ   

ಮಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಬಿಹಾರದ ಪ್ರಕರಣವೊಂದರಸಲುವಾಗಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್‌ ಪರಂಗಿಪೇಟೆಅವರ ಮನೆಗೆ ( ಬಿ.ಸಿ.ರೋಡ್‌ ಸಮೀಪ) ಗುರುವಾರ ದಾಳಿ ನಡೆಸಿ ತಪಾಸಣೆ ನಡೆಸಿದೆ.

ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು, ‘ಪಕ್ಷದ ನಾಯಕರಿಗೆ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಿಯಾಜ್‌, ‘ಎನ್‌ಐಎ ಅಧಿಕಾರಿಗಳು ಬಿಹಾರದ ಪ್ರಕರಣವೊಂದರ ವಿಚಾರಣೆ ಸಲುವಾಗಿ ಬೆಳ್ಳಂಬೆಳಗ್ಗೆ ನನ್ನ ಮನೆಗೆ ಬಂದಿದ್ದರು. ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿ ನಿರ್ದೇಶನಾಲಯ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮೊದಲಾದ ವಿಶೇಷ ತನಿಖೆ ಸಂಸ್ಥೆಗಳು ಬಿಜೆಪಿಗೆ ಅನುಕೂಲವಾಗುವಂತೆ ವರದಿಗಳನ್ನು ಸಲ್ಲಿಸಿವೆ. ಈ ಪ್ರಕರಣದಲ್ಲಿ ಹಾಗೆ ಆಗಬಾರದು. ಸತ್ಯ ಏನೆಂದು ಎನ್‌ಐಎಯವರು ಜನತೆಗೆ ತಿಳಿಸಬೇಕು. ಯಾರಿಗೂ ಅನ್ಯಾಯ ಆಗುವುದಕ್ಕೆ ಎನ್‌ಐಎ ಅವಕಾಶ ನೀಡಬಾರದು’ ಎಂದುಅವರು ಒತ್ತಾಯಿಸಿದರು.

‘ಅಮಾನವೀಯ ಕೃತ್ಯಗಳನ್ನು ಸಂಘ ಪರಿವಾರ ನಡೆಸುತ್ತಿದೆ. ಬಿಜೆಪಿ ಇದಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಎನ್‌ಐಎ ಅಧಿಕಾರಿಗಳು ಹಾಗೂ ವಿಶೇಷ ತನಿಖಾ ತಂಡಗಳು ಹೇಗೆ ನಮ್ಮ ಮನೆ ಬಾಗಿಲಿಗೆ ಬರುತ್ತವೆಯೋ, ಅದೇ ರೀತಿ ಸಂಘ ಪರಿವಾರದವರ ಮನೆ ಬಾಗಿಲಿಗೂ ಭೇಟಿ ನೀಡಲಿ. ಅವರ ಮುಖಂಡರನ್ನೂ ವಿಚಾರಣೆಗೆ ಒಳಪಡಿಸಲಿ’ ಎಂದು ಆಗ್ರಹಿಸಿದರು.

‘ಎನ್‌ಐಎ ತಂಡ ನಡೆಸಿದ ರಿಯಾಜ್ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿದ್ದು ನಿಜ. ಆದರೆ, ಅದು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್‌ ನೆಟ್ಟಾರು ಹತ್ಯೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.