ADVERTISEMENT

ಕಠಿಣ ಪರಿಶ್ರಮ ಸಾಧನೆಗೆ ಬುನಾದಿ: ನಿಖಿಲ್ ಸೊನ್ನದ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:35 IST
Last Updated 14 ಜೂನ್ 2025, 15:35 IST
ನಿಖಿಲ್ ಸೊನ್ನದ
ನಿಖಿಲ್ ಸೊನ್ನದ   

ಮಂಗಳೂರು: ‘ಕಠಿಣ ಪರಿಶ್ರಮ, ಓದಿನಲ್ಲಿ ಏಕಾಗ್ರತೆ, ಉಪನ್ಯಾಸಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ 17ನೇ ರ್‍ಯಾಂಕ್ ಪಡೆದಿರುವ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ ಹೇಳಿದರು.

‘ಉತ್ತಮ ರ್‍ಯಾಂಕ್ ಬರಬಹುದು ಎಂಬ ನಿರೀಕ್ಷೆ ಇತ್ತು, ಆದರೆ, ದೇಶ ಮಟ್ಟದಲ್ಲಿ 17ನೇ ರ್‍ಯಾಂಕ್ ಬಂದಿದ್ದು ಸಂತಸ ತಂದಿದೆ. ಪ್ರತಿದಿನದ ತರಗತಿಗಳ ಪುನರ್‌ ಮನನ, ಹೆಚ್ಚು ಸಮಸ್ಯೆಗಳನ್ನು ಬಿಡಿಸುವುದು, ಕಾಲೇಜಿನಲ್ಲಿ ನಡೆಸುವ ಅಣಕು ಪರೀಕ್ಷೆಗಳು ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾದವು. ಯಾವುದೇ ಗೊಂದಲಗಳಿದ್ದರೆ ಮರುದಿನವೇ ಉಪನ್ಯಾಸಕರನ್ನು ಕೇಳಿ ಪರಿಹರಿಸಿಕೊಂಡು, ಮುಂದಿನ ಚಾಪ್ಟರ್‌ನ ಅಭ್ಯಾಸ ಮುಂದುವರಿಸುತ್ತಿದ್ದೆ’ ಎಂದು ವಿವರಿಸಿದರು.

ನಿಖಿಲ್, ವಿಜಯಪುರದ ನರರೋಗ ತಜ್ಞ ಡಾ.ಸಿದ್ದಪ್ಪ ಸೊನ್ನದ ಮತ್ತು ನೇತ್ರತಜ್ಞೆ ಡಾ.ಮೀನಾಕ್ಷಿ ದಂಪತಿ ಪುತ್ರ. ‘ಪಾಲಕರಿಬ್ಬರೂ ವೈದ್ಯರಾದ ಕಾರಣ ಮೊದಲಿನಿಂದಲೂ ವೈದ್ಯಕೀಯ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದೆ. ಬಿಡುವಿನ ವೇಳೆಯಲ್ಲಿ ಬ್ಯಾಡ್ಮಿಂಟನ್, ಚೆಸ್ ಆಡುವುದು, ಕವಿತೆ ಬರೆಯುವುದು ನನ್ನ ಹವ್ಯಾಸ. ಚೆಸ್ ಏಕಾಗ್ರತೆ ಹೆಚ್ಚಿಸಲು ಪೂರಕವಾಯಿತು’ ಎಂದು ನಿಖಿಲ್ ಹೇಳಿದರು.

ADVERTISEMENT

ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ನಿಧಿ ಕೆ.ಜಿ ನೀಟ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ 84ನೇ ರ್‍ಯಾಂಕ್ ಗಳಿಸಿದ್ದಾರೆ.

‘9ನೇ ತರಗತಿಯಲ್ಲಿದ್ದಾಲೇ ವೈದ್ಯಕೀಯ ಶಿಕ್ಷಣ ಓದಬೇಕೆಂದು ನಿರ್ಧರಿಸಿದ್ದೆ. ದೆಹಲಿಯ ಏಮ್ಸ್ ಅಥವಾ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುವುದು ನನ್ನ ಕನಸು. ನೀಟ್ ಪರೀಕ್ಷೆ ಕಠಿಣ. ಆದರೆ, ಅರ್ಪಣಾ ಮನೋಭಾವದಿಂದ ಓದಿನಲ್ಲಿ ತೊಡಗಿದರೆ ಕಠಿಣ ಸವಾಲನ್ನೂ ಬೇಧಿಸಬಹುದು. ಎರಡು ವರ್ಷ ನಿರಂತರ ಶ್ರಮವಹಿಸಿದ್ದಕ್ಕೆ ಫಲ ದೊರೆತಿದೆ’ ಎಂದು ನಿಧಿ ಪ್ರತಿಕ್ರಿಯಿಸಿದರು.

ಕೊಡಗಿನ ಸೋಮವಾರಪೇಟೆ ಎಎಸ್‌ಐ ಕೆ.ಎಚ್.ಗಣಪತಿ ಮತ್ತು ಶಿಕ್ಷಕಿ ಗುಣವತಿ ದಂಪತಿ ಪುತ್ರಿ ನಿಧಿ.

ನಿಧಿ ಕೆ.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.