ADVERTISEMENT

ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಶಾಸಕ ಪಿ.ಎಂ. ನರೇಂದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 14:40 IST
Last Updated 13 ಅಕ್ಟೋಬರ್ 2025, 14:40 IST
ಪಿ.ಎಂ. ನರೇಂದ್ರಸ್ವಾಮಿ
ಪಿ.ಎಂ. ನರೇಂದ್ರಸ್ವಾಮಿ   

ಮಂಗಳೂರು: ‘ನನ್ನ ನವದೆಹಲಿ ಭೇಟಿಗೆ ವಿಶೇಷ ಅರ್ಥ ನೀಡುವ ಅಗತ್ಯ ಇಲ್ಲ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ (ಕೆಎಸ್‌ಪಿಸಿಬಿ) ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು,‘ಬೆಂಗಳೂರಿನಲ್ಲಿ ಇದೇ 18 ಮತ್ತು 19ರಂದು ನಡೆಯಲಿರುವ ಕೆಎಸ್‌ಪಿಸಿಬಿಯ ಸುವರ್ಣ ಮಹೋತ್ಸವ ಆಚರಣೆಗೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನು ಹಾಗೂ ಹಿರಿಯ ಅಧಿಕಾರಿಗಳನ್ನು, ಕೇಂದ್ರ ಅರಣ್ಯ ಸಚಿವಾಲಯದ ಅಧಿಕಾರಿಗಳನ್ನು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲು ನವದೆಹಲಿಗೆ ಹೋಗುತ್ತಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಪಕ್ಷದ ಆಂತರಿಕ ವಿಚಾರ. ಆ ಕುರಿತು ಬಹಿರಂಗವಾಗಿ ಚರ್ಚೆ ಮಾಡಲು ಬಯಸುವುದಿಲ್ಲ. ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷವು ಯಾವುದೇ ಸಂದರ್ಭದಲ್ಲಿ ಏನೇ ತೀರ್ಮಾನ ತೆಗೆದುಕೊಂಡರೂ ಒಪ್ಪಿಕೊಂಡು, ನನಗೆ ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷಕ್ಕೆ ಸಂಬಂಧಿಸಿದ ವಿಚಾರವನ್ನು ನಾನು ಇಲ್ಲಿ ಪ್ರಸ್ತಾಪಿಸುವುದು ಅಷ್ಟು ಸಮಂಜಸ ಅಲ್ಲ’ ಎಂದರು.

ADVERTISEMENT

ಸರ್ಕಾರಿ ಸ್ವತ್ತುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆ ನಿರ್ಬಂಧಿಸುವ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಅರ್ಥದಲ್ಲಿ ಅವರು ಆ ರಿತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸನಾತನ ಧರ್ಮ ಯಾರೊಬ್ಬರ ಸ್ವತ್ತಲ್ಲ. ಅದರ ಹೆಸರಿನಲ್ಲಿ ರಾಷ್ಟ್ರದ ಸರ್ವೊಚ್ಚ ಹುದ್ದೆ ಅಲಂಕರಿಸಿರುವ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಅನುಯಾಯಿಯೂ ಆಗಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರಿಗೆ ಪೀಠದತ್ತ ಚಪ್ಪಲಿ ಎಸೆಯಲು ಯತ್ನಿಸಿದ್ದು ಘೋರವಾದ ಕೃತ್ಯ. ಅದನ್ನು ಸನಾತನ ಧರ್ಮದ ಹೆಸರಿನಲ್ಲಿ ಆರ್‌ಎಸ್‌ಎಸ್‌, ಅಥವಾ ಮತ್ತೊಂದರ ಹೆಸರಿನಲ್ಲಿ ಸಮರ್ಥಿಸುವುದು ಸರಿಯಲ್ಲ. ಎಲ್ಲರೂ ಸಂವಿಧಾನದ ಪರವಾಗಿರಬೇಕು. ಸಾಂವಿಧಾನಿಕ ಹುದ್ದೆಗಳಿಗೆ ಗೌರವ ಕೊಡಬೇಕು’ ಎಂದರು.

‘ಪ್ರಿಯಾಂಕ್‌ ಖರ್ಗೆ ಸಚಿವರು. ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ. ನಾನು ಸಂಪುಟದಲ್ಲಿಲ್ಲ. ಯಾವುದಾದರೂ ಸಂವಿಧಾನ ವಿರೋಧಿ ವಿಚಾರ ಇದ್ದರೆ, ಅದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.