ADVERTISEMENT

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೀಲ್‌ಡೌನ್ ಚಿಂತನೆ ಇಲ್ಲ: ನಳಿನಕುಮಾರ್ ಕಟೀಲ್

ಮಂಗಳೂರು: 20 ರೈಲ್ವೆ ಬೋಗಿಗಳಲ್ಲಿ‌ ಐಸೋಲೇಶನ್ ವಾರ್ಡ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 9:08 IST
Last Updated 12 ಏಪ್ರಿಲ್ 2020, 9:08 IST
ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಬೋಗಿಗಳನ್ನು ಪರಿಶೀಲಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಬೋಗಿಗಳನ್ನು ಪರಿಶೀಲಿಸಿದರು.   

ಮಂಗಳೂರು: ಕೊರೊನಾ ಶಂಕಿತರನ್ನು ಇರಿಸಲು ಅನುಕೂಲ ಆಗುವ ದೃಷ್ಟಿಯಿಂದ ಇಲ್ಲಿನ ಕೇಂದ್ರ ರೈಲು ನಿಲ್ದಾಣದಲ್ಲಿ ರೈಲು ಬೋಗಿಗಳನ್ನು ಐಸೋಲೇಶನ್ ವಾರ್ಡ್ಗಳಾಗಿ ಪರಿವರ್ತಿಸಲಾಗಿದೆ.

ಭಾನುವಾರ ಕೇಂದ್ರ ರೈಲು ನಿಲ್ದಾಣಕ್ಕೆ ಬಂದು ಸಂಸದ ನಳಿನಕುಮಾರ್ ಕಟೀಲ್, ಬೋಗಿಗಳನ್ನು ವೀಕ್ಷಿಸಿದರು.ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲೆಯ ಮಟ್ಟಿಗೆ ಸೀಲ್ ಡೌನ್‌ ಮಾಡುವ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದರು.

ಆರಂಭದಲ್ಲಿ ಮೂರು ದಿನ ಸಂಪೂರ್ಣ ಬಂದ್ ಮಾಡಲಾಯಿತು. ನಂತರ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್19 ಆಸ್ಪತ್ರೆಯಾಗಿ ಪರಿವರ್ತಿಸಲಾಯಿತು. ಮುನ್ನೆಚ್ಚರಿಕೆಯಾಗಿ ಕೇರಳದ ಗಡಿ ಬಂದ್ ಮಾಡಲಾಯಿತು. ಇಂತಹ ಹಲವಾರು ಕ್ರಮ ಹಾಗೂ ಜನರ ಸಹಕಾರದಿಂದ ಏಳು‌ ದಿನಗಳಿಂದ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. 12 ಜನರ ಪೈಕಿ, 6 ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯಲ್ಲಿ‌ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೊಲೀಸರು‌ ಉತ್ತಮ ಕೆಲಸ‌ ಮಾಡುತ್ತಿದ್ದಾರೆ. ಕೊರೊನಾ‌ ವಿರುದ್ಧ ಹೋರಾಟದಲ್ಲಿ ಭಾಗಿಯಾದವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಮಾಡಿದರೆ, ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಹಾಗೂ ಇತರ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ ರೈಲ್ವೆ ಹಾಗೂ ದಕ್ಷಿಣ ರೈಲ್ವೆಗೆ ಸುತ್ತೋಲೆ ಹೊರಡಿಸಿತ್ತು.ಈ ನಿಟ್ಟಿನಲ್ಲಿ ಇದೀಗ ಮಂಗಳೂರಿನಲ್ಲಿ 20 ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತನೆ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.