ADVERTISEMENT

ಸೇನೆಯ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿಲ್ಲ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:31 IST
Last Updated 16 ಮೇ 2025, 14:31 IST

ಮಂಗಳೂರು: ‘ಕಾಂಗ್ರೆಸ್ಸಿಗರು ಸೇನೆಯನ್ನು ಟೀಕೆ ಮಾಡುವ ಕೆಲಸ ಮಾಡುತ್ತಿಲ್ಲ. ಬದಲಾಗಿ, ಬಿಜೆಪಿಯ ಸಚಿವರೊಬ್ಬರು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಎಫ್ಐಆರ್ ಹಾಕಬೇಕಾದ ಪರಿಸ್ಥಿತಿ ಬಂದಿದೆ ಎಂದಾದರೆ ಆ ಪಕ್ಷದ ಮುಖಂಡರ ಬಗ್ಗೆ ಏನು ಹೇಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪೆಹಲ್ಗಾಮ್ ಘಟನೆ ಹಾಗೂ ಭಾರತ- ಪಾಕ್ ನಡುವಿನ ಕದನ ವಿರಾಮದಂಥ ವಿದ್ಯಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಪಕ್ಷಗಳ ಸಭೆ ಕರೆಯಬೇಕು. ನಾವು ಕೇಳುವ ಪ್ರಶ್ನೆ, ಅನುಮಾನಗಳಿಗೆ ಅವರು ಉತ್ತರ ನೀಡಬೇಕು’ ಎಂದರು.

‘ಪೆಹಲ್ಗಾಮ್ ಘಟನೆಗೆ ಕಾರಣರಾದವರನ್ನು ಎಲ್ಲಿದ್ದರೂ ಹುಡುಕಿ ಮಣ್ಣು ಪಾಲು ಮಾಡುತ್ತೇವೆ’ ಎಂದು ಪ್ರಧಾನಿ ಹೇಳಿದ್ದರು. ಅವರ ನಿಲುವನ್ನು ನಾವು ಬೆಂಬಲಿಸಿದ್ದೆವು. ಸೇನೆಗೆ ಬೆಂಬಲವಾಗಿ ನಾವೂ ತಿರಂಗಾ ಯಾತ್ರೆ ಮಾಡಿದ್ದೇವೆ. ಈ ಮಧ್ಯದಲ್ಲೇ ಕದನ ವಿರಾಮ ಘೋಷಿಸಲಾಯಿತು. ಈ ವಿಷಯಗಳನ್ನು ರಾಜಕಾರಣಕ್ಕೆ ಬಳಸದೆ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮಾಧ್ಯಮ ಎದುರು ಬಂದು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಹಿಂದೆ ಮನಮೋಹನ್ ಸಿಂಗ್ ಅವರೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ, ನಮ್ಮ ಪ್ರಧಾನಿಗೆ ಯಾರೂ ಪ್ರಶ್ನೆ ಕೇಳುವ ಹಾಗಿಲ್ಲ. ಬಿಹಾರದಲ್ಲಿ ನಿಂತು ಭಾಷಣ ಮಾಡುವುದು, ಮನ್ ಕಿ ಬಾತ್ ಹೇಳಿಕೆ ಕೊಟ್ಟು ಹೋಗುವುದು ನಮಗೆ ಬೇಕಾಗಿಲ್ಲ. ಪಾರದರ್ಶಕತೆ, ಸ್ಪಷ್ಟತೆಯ ಮೂಲಕ ಎಲ್ಲರಲ್ಲಿ ವಿಶ್ವಾಸ ತುಂಬುವ ಕಾರ್ಯವನ್ನು ಪ್ರಧಾನಿ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.