ADVERTISEMENT

ಮಂಗಳೂರು | 'ಕಾದಂಬರಿ, ಕತೆ ಬರವಣಿಗೆ: ತರಬೇತಿ ಅಗತ್ಯ'

‘ಆಂಜೆಲ್-75‌ʼ ಕಾದಂಬರಿ ಕುರಿತ ಕಾರ್ಯಕ್ರಮದಲ್ಲಿ ಗಣನಾಥ ಎಕ್ಕಾರು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:22 IST
Last Updated 15 ಜುಲೈ 2025, 7:22 IST
ಮಂಗಳೂರಿನ ಬಜ್ಜೋಡಿಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ‘ಆಂಜೆಲ್‌ 75’ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಗಣನಾಥ ಎಕ್ಕಾರು ಮಾತನಾಡಿದರು ಪ್ರಜಾವಾಣಿ ಚಿತ್ರ
ಮಂಗಳೂರಿನ ಬಜ್ಜೋಡಿಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ‘ಆಂಜೆಲ್‌ 75’ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಗಣನಾಥ ಎಕ್ಕಾರು ಮಾತನಾಡಿದರು ಪ್ರಜಾವಾಣಿ ಚಿತ್ರ   

ಮಂಗಳೂರು: ‘ಆಂಜೆಲ್ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಕಾದಂಬರಿ, ಕತೆ ಬರವಣಿಗೆ ಕುರಿತು ಇಂದಿನ ಯುವಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ’ ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಗಣನಾಥ ಎಕ್ಕಾರು ಇಲ್ಲಿ ಹೇಳಿದರು.

ದಿ.ಜೊ.ಸಾ. ಆಲ್ವಾರಿಸ್‌ ಅವರು ರಚಿಸಿದ ಕೊಂಕಣಿ ಭಾಷೆಯ, ಕನ್ನಡ ಲಿಪಿಯ ಪ್ರಥಮ ಕಾದಂಬರಿ ‘ಆಂಜೆಲ್‌’ ಪ್ರಕಟವಾಗಿ 75 ವರ್ಷ ತುಂಬಿರುವ ಸಂಬಂಧ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ನಗರದ ಬಜ್ಜೋಡಿಯಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಆಂಜೆಲ್- 75‌ʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

‘ಐತಿಹಾಸಿಕ ಘಟನೆಗಳು, ಮೊದಲ ಬರವಣಿಗೆ, ವ್ಯಾಕರಣ, ಕತೆ, ಕಾವ್ಯವನ್ನು ಆಧಾರವಾಗಿಟ್ಟುಕೊಂಡು ಯುವ ಜನಾಂಗಕ್ಕೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಬೇಕು. ಕೊಂಕಣಿಯಲ್ಲಿ ಸಾಹಿತ್ಯ ರಚಿಸಲು ಹಲವು ಅವಕಾಶ ಇದೆ. ಅಕಾಡೆಮಿಯು ಈ ಇಂಥ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ, ಪ್ರೇರಣೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಎರಡನೇ ಮಹಾಯುದ್ಧದಲ್ಲಿ ಉಂಟಾದ ವಿಪ್ಲವ ಸಮಾಜ, ಕುಟುಂಬ ಹಾಗೂ ವ್ಯಕ್ತಿಯ ಮೇಲೆ ಬೀರಿದ ಪ್ರಭಾವವನ್ನು ‘ಆಂಜೆಲ್‌’ ವಿಸ್ತಾರವಾಗಿ ಅಭಿವ್ಯಕ್ತಗೊಳಿಸಿದೆ. ಕಥಾ ನಾಯಕಿ ಪಡೆದ ಬದಲಾವಣೆಯ ಪ್ರಕ್ರಿಯೆಯನ್ನು ಕಾದಂಬರಿ ಮೂಲಕ ಗಮನಿಸಬಹುದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ, ಯುವಕರಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಲು ಅಕಾಡೆಮಿಯು ಕೆಲಸ ಮಾಡಲಿದೆ ಎಂದರು.

ಸಾಹಿತಿ ಡಿಂಪಲ್ ಫರ್ನಾಂಡಿಸ್ ಅವರು ಕಾದಂಬರಿ ಕುರಿತು ಮಾತನಾಡಿದರು. ದಿ.ಜೊ.ಸಾ. ಆಲ್ವಾರಿಸ್ ಕುರಿತು ಸಾಹಿತಿ ರಿಚಿ ಆಲ್ವಾರಿಸ್‌ ಮಾಹಿತಿ ನೀಡಿದರು. ಆಂಜೆಲ್ ಇ– ಬುಕ್ ಕುರಿತು ಕೇರನ್ ಮಾಡ್ತಾ ಮಾಹಿತಿ ನೀಡಿದರು. ದಿ.ಜೊ.ಸಾ. ಆಲ್ವಾರಿಸ್‌ ಅವರ ಪತ್ನಿ ಮೋನಿಕಾ ಆಲ್ವಾರಿಸ್‌ ಭಾಗವಹಿಸಿದ್ದರು.

ವಿತ್ತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ಸ್ವಪ್ನಾ ಕ್ರಾಸ್ತಾ ಸ್ವಾಗತಿಸಿ, ನವೀನ್ ಲೋಬೊ ವಂದಿಸಿದರು.

ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ‘ಆಂಜೆಲ್ 75’ ಕಾರ್ಯಕ್ರಮದಲ್ಲಿ ಆಂಜೆಲ್ ಕಾದಂಬರಿಯ ಇ–ಬುಕ್ ಆವೃತ್ತಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು ಪ್ರಜಾವಾಣಿ ಚಿತ್ರ

ಸಾಹಿತ್ಯ ರಚನೆ: ಅಕಾಡೆಮಿ ಪ್ರೇರಣೆ ನೀಡಲಿ ಸಣ್ಣ ಕತೆಗೆ ಚರಿತ್ರೆ ಹೇಳಲು ಅಸಾಧ್ಯ ಅಧ್ಯಯನದಿಂದ ಭಾಷೆ ಮೇಲೆ ಒಲವು

ಕೊಂಕಣಿ ಕರಾವಳಿಗೆ ಸೀಮಿತವಲ್ಲ ಆಳವಾದ ಅಧ್ಯಯನದಿಂದ ಭಾಷೆಯ ಬಗ್ಗೆ ಪ್ರೀತಿ ಹುಟ್ಟಲು ಸಾಧ್ಯವಾಗುತ್ತದೆ. ಹಲವು ಸಂಕಷ್ಟ ವೈಚಿತ್ರ್ಯಗಳನ್ನು ಕೊಂಕಣಿ ಭಾಷೆ ದಾಟಿ ಬಂದಿದೆ. ಅದು ಕರಾವಳಿಗೆ ಸೀಮಿತವಲ್ಲ. ಗೋವಾ ಮಹಾರಾಷ್ಟ್ರ ಕೇರಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೊಂಕಣಿ ಮಾತನಾಡುವವರು ಇದ್ದಾರೆ. ಸ್ವತಂತ್ರ ಲಿಪಿ ಇಲ್ಲದೆ ಇದ್ದರೂ ಬೇರೆ ಬೇರೆ ಲಿಪಿಯಲ್ಲಿ ಅದು ಅಭಿವ್ಯಕ್ತವಾಗಿದೆ ಎಂದು ಗಣನಾಥ ಶೆಟ್ಟಿ ಹೇಳಿದರು.

ಮಕ್ಕಳಿಗೆ ಕೊಂಕಣಿ ಕಲಿಸಿ ಅತಿಥಿಯಾಗಿದ್ದ ಮಂಗಳೂರಿನ ಕೊಂಕಣಿ ನಾಟಕ ಸಭೆಯ ಅಧ್ಯಕ್ಷ ಫಾ.ರೋಕಿ ಡಿಕುನ್ಹಾ ಮಾತನಾಡಿ ‘ಆಂಜೆಲ್’ ಕೃತಿಯು ಎಲ್ಲರ ಮನೆಗಳಲ್ಲಿ ಇರಬೇಕು. ಈ ಕೃತಿಯು ಸಾಹಿತ್ಯ ಚಟುವಟಿಕೆಗೆ ಪ್ರೇರಣೆಯಾಗಿದೆ. ಪೋಷಕರು ಮಕ್ಕಳಿಗೆ ಕೊಂಕಣಿ ಕಲಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.