ADVERTISEMENT

ಮಂಗಳೂರು: ಉದ್ಯೋಗ ಖಾತರಿ ಅಡಿ ಯೋಜನೆ -ಡಾ.ಕುಮಾರ್‌

ಶಾಲೆ, ಕಾಲೇಜು, ಆಸ್ಪತ್ರೆ ಆವರಣದಲ್ಲಿ ಪೌಷ್ಟಿಕ ಕೈತೋಟ ಅಭಿಯಾನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:20 IST
Last Updated 27 ಜುಲೈ 2021, 4:20 IST
ಮಂಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್ ಮಾತನಾಡಿದರು.
ಮಂಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್ ಮಾತನಾಡಿದರು.   

ಮಂಗಳೂರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ‘ಪೌಷ್ಟಿಕ ಕೈತೋಟ’ ಅಭಿಯಾನವನ್ನು ಜಿಲ್ಲೆಯ ಎಲ್ಲ ಶಾಲೆ, ಕಾಲೇಜು, ವಸತಿ ನಿಲಯ, ಆಸ್ಪತ್ರೆಗಳ ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಪೌಷ್ಟಿಕ ಕೈತೋಟ ಅಭಿಯಾನ’ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಆವರಣದಲ್ಲಿ ಪೌಷ್ಟಿಕಾಂಶಯುಕ್ತ ತಾಜಾ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಸುವುದು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಔಷಧಿ ಗುಣವುಳ್ಳ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು. ಪೌಷ್ಟಿಕ ಕೈತೋಟ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು ಎಂದರು.

ADVERTISEMENT

ಎಲ್ಲ ಶಾಲೆ, ಅಂಗನವಾಡಿ ಮತ್ತು ವಸತಿನಿಲಯಗಳ ಆವರಣದಲ್ಲಿ ವಾತಾವರಣಕ್ಕೆ ಅನುಗುಣವಾಗುವಂತೆ ಮಾವು, ಚಿಕ್ಕು, ಪೇರಳೆ, ನುಗ್ಗೆ, ನೆಲ್ಲಿಕಾಯಿ, ನಿಂಬೆಹಣ್ಣು, ಪಪ್ಪಾಯಗಳಂತಹ ಗಿಡಗಳನ್ನು ನೆಡಬೇಕು. ಶಾಲೆ, ಕಾಲೇಜು, ಅಂಗನವಾಡಿ, ವಸತಿ ನಿಲಯಗಳು, ಆಸ್ಪತ್ರೆಗಳಲ್ಲಿ ಸೂಕ್ತ ಕಾಂಪೌಂಡ್ ಮತ್ತು ನೀರಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಂಡು ಅಂತಹ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪೌಷ್ಟಿಕ ತೋಟ ಅನುಷ್ಠಾನದ ಹಂತ ಮತ್ತು ಪೂರ್ಣಗೊಂಡ ನಂತರ ವಸತಿ ನಿಲಯ, ಅಂಗನವಾಡಿ, ಆಸ್ಪತ್ರೆಗಳ ಸಿಬ್ಬಂದಿಗೆ ಘಟಕ ನಿರ್ವಹಣೆಯ ಕುರಿತಂತೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು ಎಂದರು.

ಈ ವರ್ಷದಲ್ಲಿ 50 ಶಾಲೆ, 60 ಅಂಗನವಾಡಿ, 11 ವಸತಿನಿಲಯಗಳು ಮತ್ತು ಹಿಂದುಳಿದ ವರ್ಗಗಳ 7 ವಸತಿನಿಲಯಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಯೋಜನೆಗೆ ಸಂಬಂಧಿಸಿದಂತೆ ಯೋಶೋಗಾಥೆಗಳ ದಾಖಲೀಕರಣವನ್ನು ನೀಡಬೇಕು ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ಎಸ್.ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.