ADVERTISEMENT

ಮೂಡುಬಿದಿರೆ: ರಸ್ತೆಯಲ್ಲಿ ನರಳಾಡಿದ ವೃದ್ಧೆ, ನೆರವಿಗೆ ಬಾರದ ಜನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 9:19 IST
Last Updated 4 ಜೂನ್ 2021, 9:19 IST
ಸ್ಥಳೀಯ ವ್ಯಕ್ತಿ ಸಹಾಯದಿಂದ ಆಸ್ಪತ್ರೆ ಸೇರಿದ ವೃದ್ಧೆ
ಸ್ಥಳೀಯ ವ್ಯಕ್ತಿ ಸಹಾಯದಿಂದ ಆಸ್ಪತ್ರೆ ಸೇರಿದ ವೃದ್ಧೆ   

ಮೂಡುಬಿದಿರೆ: ಇಲ್ಲಿನ ಜೈನ್‌ಪೇಟೆಯಲ್ಲಿ ಆಟೊ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ರಸ್ತೆಯಲ್ಲೇ ನರಳಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಳೆಯಿಂದ ನೆನೆದಿದ್ದ ವೃದ್ಧೆಯು ರಸ್ತೆ ಬದಿ ನಿಂತಿದ್ದರು. ಈ ವೇಳೆ ಆಟೊವೊಂದು ವೃದ್ಧೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕೆ ಅಲ್ಲೇ ಕುಸಿದು ಬಿದ್ದು, ನರಳಾಡಿದ್ದಾರೆ. ಆಟೊ ಚಾಲಕ ತಿರುಗಿಯೂ ನೋಡದೆ ಪರಾರಿಯಾಗಿದ್ದಾನೆ. ಈ ಮಧ್ಯೆ ಸಾಕಷ್ಟು ವಾಹನ ಸವಾರರು ಆಕೆಯನ್ನು ಕಂಡರೂ ಯಾರೂ ನೆರವಿಗೆ ಧಾವಿಸಲಿಲ್ಲ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆರವಿಗೆ ಬಾರದ ಜನರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೊನೆಗೆ ಸ್ಥಳೀಯ ವ್ಯಕ್ತಿಯೊಬ್ಬರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ವೃದ್ಧೆಯ ಸಹೋದರ ಸೀತಾರಾಮ ದೇವಾಡಿಗ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಕ್ಕಿಯಾದ ವಾಹನದ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ADVERTISEMENT

ಈ ಘಟನೆಯೂ ಮೇ 31ರಂದು ಬೆಳಿಗ್ಗೆ 8.45ಕ್ಕೆ ನಡೆದಿದೆ. ಜೈನ್‌ಪೇಟೆ ಸಾವಿರ ಕಂಬದ ಬಸದಿ ಬಳಿಯ ನಿವಾಸಿಯಾದ 75 ವರ್ಷದ ಗುಲಾಬಿ ಎಂಬುವರು ಗಾಯಗೊಂಡಿದ್ದರು. ಇದೀಗ ಚೇತರಿಸಿಕೊಂಡು ಮನೆಗೆ ವಾಪಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.