ADVERTISEMENT

ಓಮೈಕ್ರಾನ್‌ ಭೀತಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 5:02 IST
Last Updated 3 ಡಿಸೆಂಬರ್ 2021, 5:02 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ದೇಶಿಯ ಹಾಗೂ ಅಂತರರಾಷ್ಟ್ರಿಯ ವಿಮಾನಯಾನ ಸಂಸ್ಥೆಗಳ ವ್ಯವಸ್ಥಾಪಕರು, ಪ್ರಯೋಗಾಲಯ ಮುಖ್ಯಸ್ಥರ ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ದೇಶಿಯ ಹಾಗೂ ಅಂತರರಾಷ್ಟ್ರಿಯ ವಿಮಾನಯಾನ ಸಂಸ್ಥೆಗಳ ವ್ಯವಸ್ಥಾಪಕರು, ಪ್ರಯೋಗಾಲಯ ಮುಖ್ಯಸ್ಥರ ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿದರು.   

ಮಂಗಳೂರು: ಓಮೈಕ್ರಾನ್‌ ಭೀತಿಯಿಂದ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಈಗಾಗಲೇ ಟಿಕೆಟ್‌ ಕಾಯ್ದಿರಿಸಿದ್ದ ಹಲವರು, ತಮ್ಮ ಪ್ರವಾಸವನ್ನು ಮುಂದೂಡುತ್ತಿದ್ದಾರೆ. ಡಿಸೆಂಬರ್‌ 15 ರವರೆಗೆ ಕಾದು ನೋಡಲು ನಿರ್ಧರಿಸಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮೈಕ್ರಾನ್‌ ತಳಿಯ ವೈರಸ್‌ ಭೀತಿಯಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುತ್ತಿದೆ. 2–3 ದಿನಗಳಿಂದ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದೀಗ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎಂದು ಏರ್‌ಲೈನ್‌ ಸಂಸ್ಥೆಯೊಂದರ ವ್ಯವಸ್ಥಾಪಕರು ತಿಳಿಸಿದ್ದಾರೆ.

‘ಇನ್ನೊಂದೆಡೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮಗಳನ್ನು ರೂಪಿಸಲಾಗುತ್ತಿದ್ದು, ಇದರಿಂದಾಗಿಯೂ ಪ್ರಯಾಣಿಕರು ವಿಮಾನ ಏರಲು ಹಿಂದೇಟು ಹಾಕುವಂತಾಗಿದೆ. ಮಹಾರಾಷ್ಟ್ರಕ್ಕೆ ಹೋಗುವ ವಿಮಾನಯಾನ ಸಂಸ್ಥೆಗಳು ಯಾವೆಲ್ಲ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎನ್ನುವುದರ ಸ್ಪಷ್ಟ ಮಾಹಿತಿ ಇಲ್ಲದಾಗಿದೆ. ಹಲವರು ಕಾದಿರಿಸಿದ್ದ ಟಿಕೆಟ್‌ಗಳನ್ನು ರದ್ದುಪಡಿಸುತ್ತಿದ್ದಾರೆ’ ಎಂದು ಇನ್ನೊಂದು ಏರ್‌ಲೈನ್‌ ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

‘ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಕೊರತೆ ಎದುರಾಗುತ್ತಿದ್ದಂತೆಯೇ ಟ್ರಾವೆಲ್ ಏಜೆನ್ಸಿಗಳಿಗೂ ಹೊಡೆತ ಬೀಳುತ್ತಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಸೆಪ್ಟೆಂಬರ್‌ನಿಂದ ತುಸು ಏರಿಕೆಯಾಗಿದ್ದ ವಹಿವಾಟು ಮತ್ತೆ ಲಾಕ್‌ಡೌನ್‌ನತ್ತ ಸಾಗುತ್ತಿದೆಯೇ ಎನ್ನುವ ಆತಂಕ ಕಾಡುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು ಎನ್ನುವ ಚಿಂತೆ ಕಾಡುತ್ತಿದೆ’ ಎಂದು ಕಾರು ಚಾಲಕ ಕರುಣಾಕರ್ ಹೇಳಿದ್ದಾರೆ.

‘ಕೆಲ ಪ್ರಯಾಣಿಕರು ನಿಗದಿಗಿಂತ ಮುಂಚೆಯೇ ತಮ್ಮ ಪ್ರಯಾಣವನ್ನು ಆರಂಭಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಡಿ.8 ರಂದು ದುಬೈಗೆ ತೆರಳಲು ಟಿಕೆಟ್‌ ಕಾಯ್ದಿರಿಸಿದ್ದ ವ್ಯಕ್ತಿಯೊಬ್ಬರು, ಇದೀಗ ಡಿಸೆಂಬರ್‌ 3ರಂದೇ ದುಬೈಗೆ ತೆರಳಲು ಮುಂದಾಗಿದ್ದಾರೆ’ ಎಂದು ಅಕ್ಬರ್ ಟ್ರಾವೆಲ್ಸ್‌ನ ಆಯಿಷಾ ಶಹಜಹಾನ್‌ ಹೇಳುತ್ತಾರೆ.

‘ಹಿರಿಯರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಲು ನಿರ್ಧರಿಸುತ್ತಿದ್ದಾರೆ. ಆದರೆ, ಯುವಕರು ಎಂದಿನಂತೆ ಪ್ರಯಾಣ ಮುಂದುವರಿಸಲು ಆಸಕ್ತಿ ತೋರುತ್ತಿದ್ದಾರೆ’ ಎಂದು ನಿರ್ಮಲ್‌ ಟ್ರಾವೆಲ್ಸ್‌ನ ಮುಖ್ಯಸ್ಥೆ ವತಿಕಾ ಪೈ ಹೇಳಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಕಟ್ಟೆಚ್ಚರ

ಕಾಸರಗೋಡು: ಓಮೈಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಟ್ಟೆಚ್ಚರ ಜಾಗ್ರತೆ ಪಾಲಿಸಬೇಕಿದೆ ಎಂದು ಪಂಚಾಯಿತಿ ಅಧ್ಯಕ್ಷರ ಸಭೆ ತಿಳಿಸಿದೆ.

ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‌ಚಂದ್ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು.

ಕಾಸರಗೋಡು ಜಿಲ್ಲೆಯಲ್ಲಿ ಎಲ್ಲರೂ ಎರಡೂ ಡೋಸ್‌ ಲಸಿಕೆ ಪಡೆಯುವಂತೆ ಸ್ಥಳೀಯಾಡಳಿತ ಸಂಸ್ಥೆಗಳು ನೇತೃತ್ವ ವಹಿಸಬೇಕು ಎಂದು ನೋಡೆಲ್ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ ತಿಳಿಸಿದರು.

ಜಿಲ್ಲೆಯ ಗ್ರಾಮೀಣ ವಲಯದಲ್ಲಿ ಲಸಿಕೆ ಶಿಬಿರ ನಡೆಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಘಟನೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ ಎಂದು ಸಂಘಟನೆಯ ಪ್ರತಿನಿಧಿ ಡಾ.ಶ್ರೀನ ತಿಳಿಸಿದರು. ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕ್ರಿಸ್‌ಮಸ್‌ಗೆ ಬರುವ ಸಾಧ್ಯತೆ ಕಡಿಮೆ

ವಿದೇಶದಲ್ಲಿ ನೆಲೆಸಿರುವ ಬಹುತೇಕ ಜನರು ಕ್ರಿಸ್‌ಮಸ್‌ ಆಚರಣೆಗೆ ತವರಿಗೆ ಮರಳುವುದು ಸಾಮಾನ್ಯ. ಆದರೆ, ಈ ಬಾರಿ ಓಮೈಕ್ರಾನ್‌ ಭೀತಿಯಿಂದಾಗಿ ತವರಿಗೆ ಮರಳಲು ಆಗುತ್ತದೆಯೋ ಇಲ್ಲವೋ ಎನ್ನುವ ಜಿಜ್ಞಾಸೆಯಲ್ಲಿ ಮುಳುಗಿದ್ದಾರೆ.

‘ಕೋವಿಡ್–19ನಿಂದಾಗಿ ಮೂರು ವರ್ಷಗಳಿಂದ ಕ್ರಿಸ್‌ಮಸ್‌ ಸಂದರ್ಭದಲ್ಲಿ ತವರಿಗೆ ಮರಳಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಬರಬೇಕು ಎನ್ನುವ ಇಚ್ಛೆ ಇತ್ತು. ಇದೀಗ ಓಮೈಕ್ರಾನ್‌ ಭೀತಿ ಶುರುವಾಗಿದ್ದು, ಡಿ.15ರ ನಂತರವೇ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ದುಬೈನಲ್ಲಿ ನೆಲೆಸಿರುವ ಲವಿಟಾ ಡಿಸೋಜ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.