ವಂಚನೆ
ಮಂಗಳೂರು: ಬಟ್ಟೆ ಖರೀದಿಸಿದರೆ ಕೈಗಡಿಯಾರ ಉಡುಗೊರೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹ 1.10 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಂಗಳವಾರ ಮಧ್ಯಾಹ್ನ ಕರೆ ಮಾಡಿದ ವ್ಯಕ್ತಿ ಕ್ಯಾಮೆಡ್ ಕಂಪನಿಯಿಂದ ₹ 5 ಸಾವಿರದ ಬಟ್ಟೆ ಖರೀದಿಸಿದರೆ ಒಂದು ಕೈಗಡಿಯಾರ ಉಡುಗೊರೆ ನೀಡುವುದಾಗಿ ತಿಳಿಸಿದ್ದ ಹಣ ಪಾವತಿಸಬೇಕಾದ ಬ್ಯಾಂಕಿನ ಖಾತೆ ವಿವರ ಹಂಚಿಕೊಂಡಿದ್ದ. ಅದಕ್ಕೆ ₹ 5,096 ಪಾವತಿಸಿದ್ದೆ. ಬಳಿಕ ಇನ್ನೊಂದು ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ತನ್ನನ್ನು ಸಂಜೀವಕುಮಾರ್ ಎಂದು ಪರಿಚಯಿಸಿಕೊಂಡ. ಈ ಹಿಂದೆ ಮಾಡಿದ ಆರ್ಡರ್ ಕನ್ಫರ್ಮ್ ಮಾಡಲು ₹ 54,932 ಪಾವತಿಸಬೇಕು. ಆ ಮೊತ್ತವನ್ನು ಮರುಪಾವತಿ ಮಾಡುತ್ತೇವೆ ಎಂದು ತಿಳಿಸಿದ್ದ. ವಾಟ್ಸ್ ಆ್ಯಪ್‌ನಲ್ಲಿ ಅದಕ್ಕೆ ಸಂಬಂಧಿಸಿದ ಬಿಲ್ ಮತ್ತು ಕೋಡ್ ಕಳುಹಿಸಿದ್ದ. ಹಣ ಪಾವತಿಸಿದ್ದೆ.’
‘ಬಳಿಕ ಸಂಜೆ ಅದೇ ವ್ಯಕ್ತಿ ಕರೆ ಮಾಡಿ. ‘ನೀವು ನಮೂದಿಸಿದ ಕೋಡ್ ತಪ್ಪಾಗಿದೆ. ಇನ್ನೊಂದು ಕೋಡ್ ಹಾಕಿ ಮತ್ತೆ ₹ 54,932 ಕಟ್ಟಿ. ಹಣವನ್ನು ಮರುಪಾವತಿ ಮಾಡುತ್ತೇವೆ’ ಎಂದಿದ್ದ. ಆ ಮೊತ್ತವನ್ನೂ ಕಟ್ಟಿದ್ದೆ. ನನಗೆ ಕರೆ ಬಂದ ನಂಬರ್‌ಗೆ ಆ ಬಳಿಕ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ. ನನ್ನಿಂದ ₹ 1.10 ಲಕ್ಷ ಪಡೆದು ಕೈಗಡಿಯಾರವನ್ನು ಉಡುಗೊರೆಯಾಗಿ ನೀಡದೇ ವಂಚಿಸಲಾಗಿದೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.