ADVERTISEMENT

ಆನ್‌ಲೈನ್‌ ವಂಚನೆ: ಗೋಪ್ಯತೆ ಕಾಪಾಡಲು ಸೂಚನೆ

ಬಿಹಾರದ ಮೂವರ ಬಂಧನ; ಬಂಧಿತರ ಬಳಿ ಸಾವಿರಕ್ಕೂ ಹೆಚ್ಚು ದಸ್ತಾವೇಜು ಪ್ರತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 22:07 IST
Last Updated 30 ಅಕ್ಟೋಬರ್ 2023, 22:07 IST
   

ಮಂಗಳೂರು: ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿದವರಲ್ಲಿ ಕೆಲವರ ಖಾತೆಗಳಿಂದ ವಂಚಕರು ಹಣ ಕದಿಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಗೋಪ್ಯತಾ ನೀತಿ ಅಳವಡಿಸಿಕೊಳ್ಳುವಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ಎಲ್ಲ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ದಸ್ತಾವೇಜಿನ ನೋಂದಣಿ ಸಮಯದಲ್ಲಿ ಪಕ್ಷಗಾರರು ಗುರುತಿನ ದಾಖಲೆಯಾಗಿ ಸಲ್ಲಿಸುವ ಆಧಾರ್‌ ಮಾಹಿತಿಯ ಗೋಪ್ಯತೆ ಕಾಪಾಡಬೇಕು. ದಸ್ತಾವೇಜಿನಲ್ಲಿ ಆಧಾರ್‌ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು ಮಾತ್ರ ನಮೂದಿಸಲು ತಿಳಿಸಬೇಕು. ಸಾರ್ವಜನಿಕರು ಸಲ್ಲಿಸುವ ಆಧಾರ್‌ ಗುರುತಿನ ಚೀಟಿಯ ಪ್ರತಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ಇಡಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

ಬಂಧನ: ಮಂಗಳೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಂಡಿರುವ ಅನೇಕ ಮಂದಿಯ ಖಾತೆಗೆ ಕನ್ನ ಹಾಕಿದ ಬಿಹಾರದ ಮೂವರನ್ನು ಅಕ್ಟೋಬರ್ 22ರಂದು ನಗರದ ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 27ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ನಿರ್ದೇಶನ ನೀಡಿದೆ.

ADVERTISEMENT

‘ಆಸ್ತಿ ನೊಂದಣಿಗೆ ಸಂಬಂಧಿಸಿದ ಕಾವೇರಿ–2 ಪೋರ್ಟಲ್‌ ಹ್ಯಾಕ್‌ ಮಾಡಿದ್ದ ಆರೋಪಿಗಳು, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದವರ ಬಯೊಮೆಟ್ರಿಕ್‌ ದಾಖಲೆಗಳನ್ನು ಕದ್ದು  ವಂಚನೆ ನಡೆಸುತ್ತಿದ್ದರು’ ಎಂದು ನಗರ ಪೊಲೀಸ್‌ ಆಯುಕ್ತ ಅನುಮಪ್‌ ಅಗರ್ವಾಲ್‌ ತಿಳಿಸಿದ್ದಾರೆ.

‘ಆರೋಪಿಗಳು ಕಾವೇರಿ-2 ಪೋರ್ಟಲ್‌ನಿಂದ ದಾಖಲಾತಿಗಳ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತಿನ ಬಯೊಮೆಟ್ರಿಕ್‌ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಸ್ಕ್ಯಾನರ್ ಮೂಲಕ ಬೆರಳುಮುದ್ರೆಯನ್ನು ಸ್ಕ್ಯಾನ್ ಮಾಡಿ, ಆಧಾರ್‌ ಆಧರಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್‌) ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ ಖಾತೆಯ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದರು’ ಎಂದು ಅವರು ವಿವರಿಸಿದ್ದಾರೆ.

‘ಇದುವರೆಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ನೊಂದಣಿ ಪತ್ರಗಳ ಪಿಡಿಎಫ್‌ ಮತ್ತು ಆಂಧ್ರಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಪತ್ರಗಳ ಪಿಡಿಎಫ್‌ ಪ್ರತಿಗಳನ್ನು ಆರೋಪಿಗಳು ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.