ADVERTISEMENT

ಮಂಗಳೂರು: ಶೇ 30 ಚಾಲಕರಿಗೂ ಸಿಗದ ಪರಿಹಾರ!

ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೀಡಾಗಿದ್ದ ಆಟೊ, ಟ್ಯಾಕ್ಸಿ ಚಾಲಕರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 16:11 IST
Last Updated 23 ಜುಲೈ 2020, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಲಾಕ್‌ಡೌನ್ ಪರಿಹಾರವಾಗಿ ಆಟೊ ಹಾಗೂ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ತಲಾ ₹ 5 ಸಾವಿರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 30ರಷ್ಟು ಮಂದಿಗೂ ತಲುಪಿಲ್ಲ.

‘ಸರ್ಕಾರವು ಸೇವಾಸಿಂಧು ಮೂಲಕ ಬ್ಯಾಡ್ಜ್‌ ಹೊಂದಿದ ಚಾಲಕರು ಅರ್ಜಿ ಸಲ್ಲಿಸುವಂತೆ ಆದೇಶಿಸಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ 20 ಸಾವಿರದಷ್ಟು ಆಟೊ, ಟ್ಯಾಕ್ಸಿ ಚಾಲಕರು ಇದ್ದರೂ 6 ಸಾವಿರದಷ್ಟು ಮಂದಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗಿತ್ತು. ಆದರೆ, ಅರ್ಜಿ ಸಲ್ಲಿಸಿದ ಶೇ 30ರಷ್ಟು ಮಂದಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವನ್‌ ಡಿಸೋಜ ತಿಳಿಸಿದರು.

ಬ್ಯಾಡ್ಜ್ ಪಡೆಯಲು 8ನೇ ತರಗತಿ ತೇರ್ಗಡೆ ಹೊಂದಿರುವುದು ಕಡ್ಡಾಯವಾಗಿದ್ದು, ಬಹುತೇಕ ಚಾಲಕರು ವಂಚಿತರಾಗಿದ್ದಾರೆ. ಅದಕ್ಕಾಗಿ ಬ್ಯಾಡ್ಜ್ ಹೊಂದದ ಚಾಲಕರಿಗೂ ಪರಿಹಾರ ನೀಡಬೇಕು ಎಂಬ ಒತ್ತಡಕ್ಕೆ ಕೇಳಿ ಬಂದಿತ್ತು. ಇದಕ್ಕೆ ಸಮ್ಮತಿಸಿದ ಸರ್ಕಾರವು, ಅವಕಾಶ ಕಲ್ಪಿಸಿದೆ. ಅರ್ಜಿ ಸಲ್ಲಿಕೆ ಅವಧಿಯನ್ನೂ ಇದೇ 30ರ ತನಕ ಮುಂದುವರಿಸಲಾಗಿದೆ.

ADVERTISEMENT

‘ಬದಲಾವಣೆಗಳನ್ನು ಸೇವಾಸಿಂಧುನಲ್ಲಿ ಸಮರ್ಪಕವಾಗಿ ಅಪ್‌ಡೇಟ್ ಮಾಡಬೇಕು’ ಎಂಬುದು ಸಂಘಟನೆಗಳ ಆಗ್ರಹವಾಗಿದೆ.

‘ಸೇವಾಸಿಂಧು ಮೂಲಕ ನೇರವಾಗಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದಾಗಿ ರಾಜ್ಯಮಟ್ಟದಲ್ಲೇ ಪರಿಹಾರ ವಿತರಣೆ ಪ್ರಕ್ರಿಯೆ ನಡೆಯುತ್ತದೆ. ಚಾಲಕರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ ತಿಳಿಸಿದರು.

ಆಟೊ ರಿಕ್ಷಾ ಚಾಲಕರಿಗೆ ಪರಿಹಾರ ಹಾಗೂ ಸೇವಾಸಿಂಧುವಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.