ADVERTISEMENT

ಮಂಗಳೂರು: ವಿಪಕ್ಷ ನಾಯಕರಿಂದ ರೈತರಿಗೆ ತಪ್ಪು ಸಂದೇಶ

ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವರ್ತನೆಗೆ ಗಣೇಶ್‌ ಕಾರ್ಣಿಕ್‌ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 19:30 IST
Last Updated 21 ಸೆಪ್ಟೆಂಬರ್ 2020, 19:30 IST
ಕ್ಯಾ.ಗಣೇಶ್ ಕಾರ್ಣಿಕ್
ಕ್ಯಾ.ಗಣೇಶ್ ಕಾರ್ಣಿಕ್   

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ಸುಳ್ಳು ಮಾಹಿತಿ ರವಾನಿಸುವ ಮೂಲಕ ರೈತರ ಮನಸ್ಸನ್ನು ಕೆಡಿಸಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್‌ ಕಾರ್ಣಿಕ್‌ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಕ್ಷೇತ್ರದ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿರುವುದು ಖಂಡನೀಯ. ಈ ಮೂಲಕ ರೈತರಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಅವರನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ದೂರಿದರು.

ರೈತರ ಬದುಕನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹತ್ತರವಾದ ಮಸೂದೆಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಆದರೆ, ಪ್ರತಿಪಕ್ಷಗಳು ಮಾತ್ರ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಮಸೂದೆಗಳ ಬಗ್ಗೆ ರೈತರಿಗೆ ತಪ್ಪು ಕಲ್ಪನೆ ಮೂಡಿಸುತ್ತಿವೆ ಎಂದು ಆರೋಪಿಸಿದರು.

ADVERTISEMENT

ಕನಿಷ್ಠ ಬೆಂಬಲ ಬೆಲೆ ಯೋಜನೆ ಕೈಬಿಡಲಾಗುತ್ತದೆ ಎಂಬ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ವಾಸ್ತವದಲ್ಲಿ ಬೆಂಬಲ ಬೆಲೆ ಯೋಜನೆ ಮೊದಲಿನಂತೆಯೇ ಮುಂದುವರಿಯಲಿದೆ. ರೈತರು ಕನಿಷ್ಠ ಬೆಂಬಲ ಬೆಲೆಯಲ್ಲಿಯೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಎಪಿಎಂಸಿಗಳಲ್ಲೂ ಮೊದಲಿನಂತೆಯೇ ವಹಿವಾಟು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿ ಜಿಲ್ಲೆಯಲ್ಲೂ ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ಜನರಲ್ಲಿ ಹಾಗೂ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು. ಮಸೂದೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಶೀಘ್ರದಲ್ಲಿಯೇ ನೂತನ ಮರಳು ನೀತಿಯನ್ನು ಅಳವಡಿಸಲಾಗುತ್ತಿದ್ದು, ಸಂಸದ ನಳಿನ್‌ಕುಮಾರ್ ಅವರು ಹೇಳಿರುವಂತೆ ₹2 ಸಾವಿರ ದರದಲ್ಲಿ ಮರಳನ್ನು ಪೂರೈಸಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.