ADVERTISEMENT

ಪಚ್ಚನಾಡಿ ತ್ಯಾಜ್ಯ ದುರಂತ; ವರ್ಷ ಕಳೆದರೂ ಸಿಗದ ‘‍ಪರಿಹಾರ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:51 IST
Last Updated 20 ಸೆಪ್ಟೆಂಬರ್ 2020, 2:51 IST
ಪಚ್ಚನಾಡಿ ತ್ಯಾಜ್ಯ ದುರಂತದ ಚಿತ್ರಣ
ಪಚ್ಚನಾಡಿ ತ್ಯಾಜ್ಯ ದುರಂತದ ಚಿತ್ರಣ   

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದುರಂತ ಸಂಭವಿಸಿ ವರ್ಷ ಕಳೆದಿದೆ. ಆದರೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ತಲುಪಿಲ್ಲ. ಇತ್ತ ನೆಲೆಯೂ ಇಲ್ಲ, ಅತ್ತ ಕೊರೊನಾ ಕಾರಣ ದುಡಿಮೆಯೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.

2019ರ ಆಗಸ್ಟ್‌ 6ರಂದು ಪಚ್ಚನಾಡಿ ತ್ಯಾಜ್ಯ ಹರಿದು ಹೋಗಿ ಮಂದಾರ ಪ್ರದೇಶದ ಸುಮಾರು 27 ಕುಟುಂಬಗಳ ಮನೆ, ಕೃಷಿ ಭೂಮಿ ಮೇಲೆ ಬಿದ್ದು ಹಾನಿ ಉಂಟಾಗಿತ್ತು. ಈ ಸಂಕಷ್ಟದಿಂದ ಹೊರಬರುವ ಮೊದಲೇ ಕೊರೊನಾ ಪಿಡುಗು ಕಾಡಿದ್ದು, ನಿತ್ಯದ ಬದುಕಿಗೂ ತತ್ವಾರ ಉಂಟಾಗಿದೆ. ಸಿಗಬೇಕಾಗಿದ್ದ ಪರಿಹಾರವೂ ಸಿಗದೇ ಪರದಾಡುವಂತಾಗಿದೆ.

ಅಂದು, ಈ ಪರಿಸರವು ವಾಸಯೋಗ್ಯವಲ್ಲ ಎಂದು ನಿರ್ಧರಿಸಿದ ಮಂಗಳೂರು ಮಹಾನಗರ ಪಾಲಿಕೆಯು 25 ಕುಟುಂಬಗಳನ್ನು ಕುಡುಪು ಸಮೀಪದ ಕರ್ನಾಟಕ ಗೃಹ ಮಂಡಳಿಯ ವಸತಿ ಸಂಕೀರ್ಣಕ್ಕೆ ಸ್ಥಳಾಂತರಿಸಿತ್ತು. ಅಂದಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಭೇಟಿ ನೀಡಿದ್ದು, 3 ತಿಂಗಳೊಳಗಾಗಿ ಸೂಕ್ತ ಮತ್ತು ಗರಿಷ್ಠ ಪರಿಹಾರದ ಭರವಸೆ ನೀಡಿದ್ದರು. ಇಬ್ಬರೂ ಅಧಿಕಾರಿಗಳು ಸಂಬಂಧಿತ ಹುದ್ದೆಯಲ್ಲಿ ಇಲ್ಲ.

ADVERTISEMENT

ಕೆಲವೊಂದು ಸಂತ್ರಸ್ತರಿಗೆ ಪರಿಹಾರ ದೊರಕಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ವಿತರಣೆ ಆಗಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅವಶ್ಯಕತೆ ಇದೆ. ಪ್ರದೇಶವನ್ನು ನಾಶ ಮಾಡಿದ ಸುಮಾರು 10 ಲಕ್ಷ ಟನ್ ಘನ ತ್ಯಾಜ್ಯಗಳ ವಿಲೇವಾರಿ ಆಗಬೇಕಿದೆ ಎನ್ನುತ್ತಾರೆ ಸಂತ್ರಸ್ತರು.

‘ನಮ್ಮ ಎಲ್ಲ ದಾಖಲೆಗಳನ್ನು ನೀಡಿದ್ದರೂ, ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಅನಾರೋಗ್ಯವೂ ಕಾಡುತ್ತಿದೆ. ದೈನಂದಿನ ಬದುಕು ಕಠಿಣವಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಚಂದ್ರಹಾಸ.

ನಮ್ಮ ಮನೆಯಲ್ಲಿ ಆರು ಸದಸ್ಯರಿದ್ದು, ಕೊರೊನಾ ಕಾರಣ ದುಡಿಮೆಯೂ ಇಲ್ಲದಾಗಿದೆ. ನಿತ್ಯ ಊಟೋಪಚಾರಕ್ಕೂ ಕಷ್ಟ ಪಡುವಂತಾಗಿದೆ ಎಂದು ಮಂಜುಳಾ ನಾಗರಾಜ್ ನೋವು ತೋಡಿಕೊಳ್ಳುತ್ತಾರೆ.

27 ಸಂತ್ರಸ್ತ ಕುಟುಂಬಗಳು, ಸುಮಾರು 54 ಜನರ ಕೃಷಿ, ಪರಿವರ್ತಿತ ಭೂಮಿ ಸೇರಿದಂತೆ 15 ಎಕರೆಗೂ ಅಧಿಕ ನಷ್ಟವಾಗಿದೆ. ಇನ್ನು ಕೆರೆ, ಬಾವಿ, ಪಂಪ್‌ಸೆಟ್ ಇತ್ಯಾದಿಗಳ ನಷ್ಟ ಅಂದಾಜು ಮಾಡಿಲ್ಲ. ಆದರೂ, ಈ ಬಗ್ಗೆ ಸಂತ್ರಸ್ತರೆಲ್ಲ ದಾಖಲೆಗಳನ್ನು ಸಲ್ಲಿಸಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದೇವೆ. ಹೊಸದಾಗಿ ಬಂದ ಅಧಿಕಾರಿಗಳಿಂದ ತ್ವರಿತ ಸ್ಪಂದನೆಯ ಅಪೇಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮಂದಾರ ರಾಜೇಶ್ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.