ADVERTISEMENT

ತಾಳೆ ಕೃಷಿಕರ ಮೊಗದಲ್ಲಿ ಮಂದಹಾಸ, ದೇಸೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ

ಟನ್‌ಗೆ ₹ 21,300 ದರ ಲಭ್ಯ

ಸಂಧ್ಯಾ ಹೆಗಡೆ
Published 7 ಮೇ 2022, 2:51 IST
Last Updated 7 ಮೇ 2022, 2:51 IST
ಸುಳ್ಯ ತಾಲ್ಲೂಕಿನ ತೊಡಿಕಾನದ ಪ್ರೇಮಾ ವಸಂತ ಅವರ ತೋಟದಲ್ಲಿ ಕೊಯ್ಲು ಮಾಡಿದ ತಾಳೆ ಹಣ್ಣನ್ನು ವಾಹನಕ್ಕೆ ಲೋಡ್ ಮಾಡುತ್ತಿರುವುದು.
ಸುಳ್ಯ ತಾಲ್ಲೂಕಿನ ತೊಡಿಕಾನದ ಪ್ರೇಮಾ ವಸಂತ ಅವರ ತೋಟದಲ್ಲಿ ಕೊಯ್ಲು ಮಾಡಿದ ತಾಳೆ ಹಣ್ಣನ್ನು ವಾಹನಕ್ಕೆ ಲೋಡ್ ಮಾಡುತ್ತಿರುವುದು.   

ಮಂಗಳೂರು: ಇಂಡೊನೇಷ್ಯಾದಲ್ಲಿ ತಾಳೆ ಎಣ್ಣೆ ರಫ್ತಿಗೆ ನಿಷೇಧ ಹೇರುವ ಮುನ್ನವೇ, ಭಾರತದ ದೇಸೀಯ ಮಾರುಕಟ್ಟೆಯಲ್ಲಿ ತಾಳೆ ಹಣ್ಣಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಬೆಳಗಾರನಿಗೆ ಟನ್‌ವೊಂದಕ್ಕೆ ₹21,300 ದರ ಲಭ್ಯವಾಗುತ್ತಿದೆ.

‘ಎರಡು ತಿಂಗಳ ಹಿಂದೆ ತಾಳೆ ಹಣ್ಣು ಒಂದು ಟನ್‌ಗೆ ₹15 ಸಾವಿರ ದರ ಸಿಗುತ್ತಿತ್ತು. ಒಂದೂವರೆ ತಿಂಗಳ ಈಚೆಗೆ ಒಂದು ಟನ್‌ ಮೇಲೆ ₹ 6,300ರಷ್ಟು ಹೆಚ್ಚು ದರ ಸಿಗುತ್ತಿದೆ. ಇನ್ನೂ ಹೆಚ್ಚು ದರ ಸಿಗಬಹುದೆಂಬ ನಿರೀಕ್ಷೆಯಿದೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳೆಗಾರರು.

ಹಳದಿ ರೋಗದಿಂದ ಅಡಿಕೆ ಬೆಳೆ ನಷ್ಟವಾಗಿರುವ ರೈತರು ಪರ್ಯಾಯವಾಗಿ ತಾಳೆ ಬೆಳೆಯಬಹುದು. ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದ ಹವಾಮಾನ ಕೂಡ ತಾಳೆ ಬೆಳೆಯಲು ಪೂರಕವಾಗಿದೆ ಎಂಬುದು ತೋಟಗಾರಿಕಾ ಇಲಾಖೆ ನೀಡುವ ಸಲಹೆ.

ADVERTISEMENT

‘ಭಾರತದಲ್ಲಿ ಖಾದ್ಯ ತೈಲದ ವಾರ್ಷಿಕ ಬೇಡಿಕೆ 236 ಲಕ್ಷ ಟನ್‌ನಷ್ಟಿದ್ದು, ದೇಶದಲ್ಲಿ 70–80 ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಬೇಡಿಕೆ ಪೂರೈಸಲು ಮಲೇಷ್ಯಾ, ಇಂಡೊನೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ದೇಸೀಯ ಮಾರುಕಟ್ಟೆಯಲ್ಲಿ ತಾಳೆಗೆ ನಿರಂತರ ಬೇಡಿಕೆ ಇದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯ್ಕ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ತಾಳೆ ಬೆಳೆಯೆಡೆಗೆ ಮುಖ ಮಾಡಿದ್ದು, ವರ್ಷದ ಹಿಂದೆ 40 ಹೆಕ್ಟೇರ್ ಇದ್ದ ಪ್ರದೇಶ ಈಗ 60 ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ. ನೀರು ಮತ್ತು ಗೊಬ್ಬರವನ್ನು ಸಕಾಲಕ್ಕೆ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು. ಒಳ್ಳೆಯ ದರ ಇರುವ ತಾಳೆಗೆ ಸರ್ಕಾರದಿಂದ ಬೆಂಬಲ ಬೆಲೆ, ಸಹಾಯಧನ, ನಿರ್ವಹಣೆ ವೆಚ್ಚ ನೀಡುವ ಸೌಲಭ್ಯ ಇದೆ. ಗಿಡಗಳ ಪೂರೈಕೆ ಮಾಡುವ ಕಂಪನಿಯೇ ಬೆಳೆ ಖರೀದಿ ಒಪ್ಪಂದ ಮಾಡಿಕೊಳ್ಳುತ್ತದೆ ಎನ್ನುತ್ತಾರೆ ಅವರು.

‘25 ಎಕರೆ ತೋಟದಲ್ಲಿ ಅಡಿಕೆ, ಕೋಕೊ, ತೆಂಗು, ತಾಳೆ ಬೆಳೆಗಳು ಇವೆ. 1,250ರಷ್ಟು ತಾಳೆ ಮರಗಳು ಇವೆ. ಅಡಿಕೆ ವರ್ಷಕ್ಕೆ ಎರಡು ಬೆಳೆಯಾದರೆ, ತಾಳೆ ಹಣ್ಣನ್ನು ತಿಂಗಳಿಗೆ ಎರಡು ಬಾರಿ ಕಟಾವು ಮಾಡಲಾಗುತ್ತದೆ. ಪ್ರತಿ ಕೊಯ್ಲಿನಲ್ಲಿ ಸರಾಸರಿ 10 ಟನ್ ಉತ್ಪನ್ನ ಸಿಗುತ್ತದೆ. ಕೊಯ್ಲು ಕೂಡ ಅಡಿಕೆಯಷ್ಟು ಕಠಿಣವಲ್ಲ. ಕಂಪನಿಯ ವಾಹನ ಮನೆ ಬಾಗಿಲಿಗೆ ಬಂದು ಬೆಳೆಯನ್ನು ಕೊಂಡೊಯ್ಯುತ್ತದೆ. ಬರುವ ಆದಾಯ ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ’ ಎನ್ನುತ್ತಾರೆ ಮೂರು ದಶಕಗಳಿಂದ ತಾಳೆ ಬೆಳೆಯುತ್ತಿರುವ ಸುಳ್ಯ ತಾಲ್ಲೂಕು ತೊಡಿಕಾನದ ಪ್ರೇಮಾ ವಸಂತ.

‘ಅಡಿಕೆಗಿಂತ ತಾಳೆ ಉತ್ತಮ’

‘ಒಂದು ತಾಳೆ ಮರದಿಂದ ವರ್ಷಕ್ಕೆ ಕನಿಷ್ಠ 200 ಕೆ.ಜಿ. ಉತ್ಪನ್ನ ಸಿಗುತ್ತದೆ. ಕಡಿಮೆ ಕೂಲಿ ಬಯಸುವ ತಾಳೆಗೆ ಕಳ್ಳರ ಭಯವೂ ಇಲ್ಲ. ಭಾರದ ಗೊನೆ ಕಳ್ಳತನ ಮಾಡುವುದು ಸುಲಭವಲ್ಲ. ರೋಗಬಾಧೆಯೂ ಕಡಿಮೆ. ಗಿಡ ನಾಟಿ ಮಾಡಿದ ನಾಲ್ಕು ವರ್ಷಗಳವರೆಗೆ ಸಹಾಯಧನ ಸಿಗುತ್ತದೆ. ಬೇಸಿಗೆಯಲ್ಲಿ ನೀರಿಲ್ಲದಿದ್ದರೆ ಅಡಿಕೆ ಮರ 15 ದಿನಕ್ಕೆ ಒಣಗಬಹುದು. ಆದರೆ, ತಾಳೆ ಎರಡು ತಿಂಗಳು ನೀರಿನ ಕೊರತೆಯಾದರೂ ಸದೃಢವಾಗಿರುತ್ತದೆ. ಅಡಿಕೆಯಂತೆ ಮಾರುಕಟ್ಟೆ ಅನಿಶ್ಚಿತತೆಯ ಆತಂಕವೂ ಇಲ್ಲ’ ಎನ್ನುತ್ತಾರೆ ಪ್ರೇಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.