
ಮಂಗಳೂರು: ‘ಯಾವುದೇ ಕುಂದುಕೊರತೆಗಳು ತಳ ಹಂತದಲ್ಲೇ ಬಗೆಹರಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವಲ್ಲಿ ಪಂಚಾಯಿತಿಗಳ ಪಾತ್ರ ಮಹತ್ವದ್ದು. ಕುಂದುಕೊರತೆಗಳನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ರಾಜಕೀಯೇತರ ಸಂಘಟನೆಗಳು ಸಕ್ರಿಯ ಪಾತ್ರವನ್ನು ವಹಿಸಬೇಕು’ ಎಂದು ಬೆಂಗಳೂರಿನ ಮಾನವ ಹಕ್ಕು ಕಾರ್ಯಕರ್ತ ವಾದಿರಾಜ್ ಹೇಳಿದರು.
ನಗರದ ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನವ ಹಕ್ಕು ಕೋಶ, ಜಾಗೃತಿ ಗ್ರಾಹಕರ ಕ್ಲಬ್, ವಿದ್ಯಾರ್ಥಿ ಪರಿಷತ್, ರಾಜ್ಯಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ (ಐಕ್ಯುಎಸಿ) ಆಶ್ರಯದಲ್ಲಿ ಕಾಲೇಜಿನಲ್ಲಿ ಮಲೆಕುಡಿಯ, ಕೊರಗ ಸಮುದಾಯಗಳ ಮುಖಂಡರ ಜೊತೆ ಗುರುವಾರ ಹಮ್ಮಿಕೊಂಡಿದ್ದ ‘ಜನರ ಘನತೆಗಾಗಿ ಮಾನವ ಹಕ್ಕುಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್‌ನ ವಕೀಲ ಸತೀಶ್ ಕಳವಾರ್‌ಕರ್, ‘ಸ್ಥಳೀಯ ಮಟ್ಟದಲ್ಲಿ ಸಾಮರಸ್ಯ ಕಾಪಾಡುವುದು ಪಂಚಾಯಿತಿಗಳ ಸಾಮಾಜಿಕ ನ್ಯಾಯ ಸಮಿತಿಗಳ ಹೊಣೆ. ದುರದೃಷ್ಟವಶಾತ್ ಬಹುತೇಕ ಪಂಚಾಯಿತಿಗಳಿಗೆ ಅವುಗಳ ಪಾತ್ರ ಏನು ಎಂಬುದೇ ಗೊತ್ತಿಲ್ಲ. ಸೆಷನ್ ನ್ಯಾಯಾಲಯಗಳು ಮಾನವ ಹಕ್ಕು ನ್ಯಾಯಾಲಯಗಳಾಗಿಯೂ ಕಾರ್ಯನಿರ್ವಹಿಸಬಹುದು ಎಂಬ ವಿಚಾರವು ಅನೇಕರಿಗೆ ತಿಳಿದಿಲ್ಲ. ಈ ಕುರಿತ ಜಾಗೃತಿ ಕೊರತೆಯಿಂದಾಗಿ ಮಾನವ ಹಕ್ಕು ನ್ಯಾಯಾಲಯದಲ್ಲಿ ಪ್ರಕರಣಗಳೇ ದಾಖಲಾಗುತ್ತಿಲ್ಲ’ ಎಂದರು.
‘ಭೂಸುಧಾರಣಾ ಕಾಯ್ದೆಯು ಭೂ ಮಾಲೀಕರ ಮೂಲಭೂತ ಹಕ್ಕಿನ ಉಲ್ಲಂಘನೆ. ಆದರೂ ಈ ಕಾಯ್ದೆಯು ಬುಡಕಟ್ಟು ಜನರನ್ನು ಹಾಗೂ ಬಡ ರೈತರನ್ನು ಸಬಲೀಕರಣ ಮಾಡಿದೆ ಎಂಬ ಕಾರಣಕ್ಕೆ ಅದನ್ನು ಸಮರ್ಥಿಸಿಕೊಳ್ಳಲಾಗುತ್ತದೆ‘ ಎಂದರು.
ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಗೀತಾ ಎಂ.ಎಲ್. ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖಸ್ಥರಾದ ಮಮತಾ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಂತೋಷ್ ಪಿಂಟೊ, ಐಕ್ಯುಎಸಿ ಮತ್ತು ಗ್ರಾಹಕರ ಕ್ಲಬ್ ಸಂಯೋಜಕ ತೆರೆಸಾ ಪೆರೇರಾ ಭಾಗವಹಿಸಿದ್ದರು.
ಬುಡಕಟ್ಟು ಜನರ ಬವಣೆ..
ಕುದುರೆಮುಖ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ನೆಲೆಸಿರುವ ಮಲೆಕುಡಿಯರ ಸಮಸ್ಯೆಗಳನ್ನು ದಕ್ಷಿಣ ಕನ್ನಡ ಮಲೆಕುಡಿಯರ ಸಂಘದ ಅಧ್ಯಕ್ಷ ಹರೀಶ್ ಎಳನೀರು ಅವರು ಎಳೆ ಎಳೆಯಾಗಿ ಬಿಚ್ಚಿಟ್ಟರು. ‘ಪಂಚಾಯಿತಿ ಅಧಿಕಾರಿಗಳು ಪರ್ಯಾಯ ಪುನರ್ವಸತಿ ಪ್ಯಾಕೇಜ್ ಒದಗಿಸದೆಯೇ ಒಕ್ಕಲೆಬ್ಬಿಸುತ್ತಿರುವುದರಿಂದ ಕೊರಗ ಸಮುದಾಯ ಆತಂಕಕ್ಕೆ ಒಳಗಾಗಿದೆ‘ ಎಂದು ಸುಮತಿ ಕೊರಗ ಆರೋಪಿಸಿದರು.