
ಸುಬ್ರಹ್ಮಣ್ಯ: ಸಹಸ್ರ ಸೀಮೆಯನ್ನೊಳಗೊಂಡ ಪಂಜ ಕ್ಷೇತ್ರದ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಶುಕ್ರವಾರ ರಾತ್ರಿ ನೆರವೇರಿತು.
ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ವಿವಿಧ ವೈಧಿಕ ವಿದಿವಿಧಾನದ ಬಳಿಕ ನಡೆದ ಮಹಾರಥೋತ್ಸವದಲ್ಲಿ ಉತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡರು.
ದೈವ-ದೇವರ ಭೇಟಿ: ದೇವರ ರಾತ್ರಿಯ ಮಹಾಪೂಜೆಯ ನಂತರ ದೇವರ ಒಳಾಂಗಣ ಉತ್ಸವ, ಬಳಿಕ ಹೊರಾಂಗಣದಲ್ಲಿ ಉತ್ಸವ ಆರಂಭವಾಯಿತು. ನಂತರ ದೇವಳದ ಹೊರಾಂಗಣದಲ್ಲಿ ವಿವಿಧ ನಾದಮಯ ಸುತ್ತುಗಳನ್ನೊಳಗೊಂಡ ದೇವರಬಲಿ ಉತ್ಸವ ನೆರವೇರಿತು. ಬಳಿಕ ವಸಂತ ಕಟ್ಟೆಪೂಜೆ, ರಥಬೀದಿಗೆ ದೇವರು ಪ್ರವೇಶಿಸುವಾಗ ಮತ್ತು ದೇವರು ಬ್ರಹ್ಮರಥಾರೋಹಣರಾಗುವಾಗ ಕಾಚುಕುಜುಂಬ ದೈವದ ಭೇಟಿ ಮತ್ತು ನುಡಿಗಟ್ಟು ನೆರವೇರಿತು. ರಥಾರೋಹಣದ ಬಳಿಕ ಕಾಚುಕುಜುಂಬ ದೈವದ ನರ್ತನ ಸೇವೆ ನೆರವೇರಿತು.
ವಿದ್ಯುದ್ದೀಪಾಲಂಕಾರದ ಜೊತೆಗೆ ದೇವರ ಮಹಾ ರಥೋತ್ಸವವು ಜರುಗಿತು. ಬಳಿಕ ಮಹಾಪೂಜೆ, ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಿತು. ರಥೋತ್ಸವದ ಸಂದರ್ಭದಲ್ಲಿ ಸುಡುಮದ್ದುಗಳ ಪಂಜ ಬೆಡಿಯು ಬಾನಂಗಳದಲ್ಲಿ ಚಿತ್ತಾರವನ್ನು ಮೂಡಿಸಿತು.
ದೇವಳದ ರಥಬೀದಿಯಲ್ಲಿ ರಥೋತ್ಸವದ ಮೊದಲು 28 ಭಜನಾ ತಂಡಗಳ 500ಕ್ಕೂ ಮಿಕ್ಕಿ ಭಜಕರಿಂದ ಕುಣಿತ ಭಜನಾ ಸೇವೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.