ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಮಾರ್ಚ್ 22ರಂದು ಕಾಡಿನಲ್ಲಿ ಪತ್ತೆಯಾಗಿದ್ದ ಶಿಶುವಿನ ತಂದೆ-ತಾಯಿ ವಿವಾಹವಾಗಿದ್ದಾರೆ.
ಕಾಡಿನಲ್ಲಿ ಪತ್ತೆಯಾದ ಶಿಶುವು ಬೆಳಾಲು ಗ್ರಾಮದ ಮಾಯ ಪ್ರದೇಶದ ನಿವಾಸಿ ರಂಜಿತ್ ಗೌಡ (27) ಹಾಗೂ ಧರ್ಮಸ್ಥಳ ಬಳಿಯ ಪಾಂಗಾಳ ನಿವಾಸಿ ಸುಶ್ಮಿತಾ ಅವರಿಗೆ ಸೇರಿದ್ದು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದರು.
ಎರಡೂ ಕುಟುಂಬಗಳ ಪ್ರಮುಖರ ಸಮ್ಮುಖದಲ್ಲಿ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಅವರ ವಿವಾಹ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಶಿಶುವನ್ನು ಪುತ್ತೂರಿನ ವಾತ್ಸಲ್ಯಧಾಮ ದತ್ತು ಕೇಂದ್ರದ ಸುಪರ್ದಿಗೆ ವಹಿಸಿದ್ದಾರೆ. ‘ಶಿಶುವನ್ನು ಕಾನೂನಾತ್ಮಕವಾಗಿ ವಾಪಾಸ್ ಪಡೆಯುತ್ತೇವೆ’ ಎಂದು ದಂಪತಿ ತಿಳಿಸಿದ್ದಾರೆ.
‘ರಂಜಿತ್, ಮಂಗಳೂರಿನ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಶ್ಮಿತಾಳನ್ನು ಪ್ರೀತಿಸುತ್ತಿದ್ದ. ಮದುವೆಯಾಗುವ ಭರವಸೆ ನೀಡಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಆಕೆ ಈಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಬಳಿಕ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಯುವತಿಯು ಶಿಶುವನ್ನು ರಂಜಿತ್ ಗೌಡನ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಆತ ಅದನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಂಜಿತ್ ಗೌಡನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಆತ ಸುಶ್ಮಿತಾ ಅವರನ್ನು ಮದುವೆಯಾಗಲು ಒಪ್ಪಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.