ADVERTISEMENT

ಶ್ರೀರಾಮ ದೇವರ ಪ್ರತಿಮೆ ಲೋಕಾರ್ಪಣೆ 28ರಂದು

ಪರ್ತಗಾಳಿ ಮಠ: 77 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಮಾಡಲಿಸುವ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:07 IST
Last Updated 25 ನವೆಂಬರ್ 2025, 4:07 IST
ಗೋಕರ್ಣ ಪರ್ತಗಾಳಿ ಜೋವೋತ್ತಮ ಮಠದಲ್ಲಿ ನಿರ್ಮಿಸಲಾದ ಶ್ರೀರಾಮ ದೇವರ 77 ಅಡಿ ಎತ್ತರದ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ಭಿತ್ತಿಫಲಕವನ್ನು ಅಮ್ಮೆಂಬಳ ನಾಗೇಶ್ ಕಾಮತ್‌, ಮುಕುಂದ ಕಾಮತ್‌, ಪ್ರದೀಪ್ ಜಿ.ಪೈ, ಬಸ್ತಿ ಶ್ರೀಪಾದ ಶೆಣೈ ಹಾಗೂ ಎಸ್.ಪಾಂಡುರಂಗ ಆಚಾರ್ಯ ಅವರು ಮಂಗಳೂರಿನಲ್ಲಿ ಸೋಮವಾರ ಬಿಡುಗಡೆ ಮಾಡಿದರು
ಗೋಕರ್ಣ ಪರ್ತಗಾಳಿ ಜೋವೋತ್ತಮ ಮಠದಲ್ಲಿ ನಿರ್ಮಿಸಲಾದ ಶ್ರೀರಾಮ ದೇವರ 77 ಅಡಿ ಎತ್ತರದ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ಭಿತ್ತಿಫಲಕವನ್ನು ಅಮ್ಮೆಂಬಳ ನಾಗೇಶ್ ಕಾಮತ್‌, ಮುಕುಂದ ಕಾಮತ್‌, ಪ್ರದೀಪ್ ಜಿ.ಪೈ, ಬಸ್ತಿ ಶ್ರೀಪಾದ ಶೆಣೈ ಹಾಗೂ ಎಸ್.ಪಾಂಡುರಂಗ ಆಚಾರ್ಯ ಅವರು ಮಂಗಳೂರಿನಲ್ಲಿ ಸೋಮವಾರ ಬಿಡುಗಡೆ ಮಾಡಿದರು   

ಮಂಗಳೂರು: ಗೌಡ ಸಾರಸ್ವತ ಸಮಾಜದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಸ್ಥಾಪನೆಯಾಗಿ 550 ವರ್ಷ ತುಂಬಿದ ಪ್ರಯುಕ್ತ ಮಠದ ಪ್ರಾಂಗಣದಲ್ಲಿ ನಿರ್ಮಿಸಿರುವ 77 ಅಡಿ ಎತ್ತರದ ಶ್ರೀರಾಮ ದೇವರ ಕಂಚಿನ ಪ್ರತಿಮೆ ಹಾಗೂ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 28ರಂದು ಲೋಕಾರ್ಪಣೆಗೊಳಿಸಲಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟನಾ ಸಮಿತಿ ಜಂಟಿ ಸಂಚಾಲಕ ಮುಕುಂದ ಕಾಮತ್‌, ‘ಮಠದ ಪ್ರಾಂಗಣದಲ್ಲಿ ಶಿಲ್ಪಿಗಳಾದ ರಾಮ್ ಸುತಾರ್ ಹಾಗೂ ಅನಿಲ್ ಸುತಾರ್‌ ನೇತೃತ್ವದಲ್ಲಿ ಶ್ರೀರಾಮ ದೇವರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಠದ ಪೀಠಾಧಿಪತಿ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಇದೇ 28ರಂದು ಬೆಳಿಗ್ಗೆ 11ಕ್ಕೆ ಪ್ರತಿಷ್ಠಾ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ. ಅಂದು ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರವಾದ ಈ ಪ್ರತಿಮೆಯನ್ನು ಅನಾವರಣಗೊಳಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಸ್ಮರಣಾರ್ಥ ನಾಣ್ಯ  ಹಾಗೂ ಅಂಚೆಚೀಟಿ ಬಿಡುಗಡೆ ಮಾಡುವರು. ರಾಮಾಯಣ ಆಧರಿತ ಥೀಂ ಪಾರ್ಕ್‌ ಲೋಕಾರ್ಪಣೆ ಮಾಡಲಿರುವರು’ ಎಂದರು.   

ಸಂಘಟನಾ ಸಮಿತಿ ಸಂಚಾಲಕ ಪ್ರದೀಪ್‌ ಜಿ. ಪೈ, ‘ಈ ಸಂಭ್ರಮದ ಪ್ರಯುಕ್ತ ಇದೇ 27ರಿಂದ ಡಿ. 7ರವರೆಗೆ 11 ದಿನಗಳ ಕಾಲ  ‘ಸಾರ್ಧಪಂಚಶತಮಾನೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಒಟ್ಟು 1.20 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಶ್ರೀರಾಮ ದೇವರ ಪ‍್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸುತ್ತಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯ. ಇದುವರೆಗೆ ಯಾವ ಪ್ರಧಾನಿಯೂ ನಮ್ಮ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಈ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಉಡುಪಿ ಫಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅವರ ಶಿಷ್ಯ ವಿದ್ಯರಾಜೇಶ್ವರ ತೀರ್ಥ ಸ್ವಾಮೀಜಿ, ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ, ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.  

ADVERTISEMENT

‘ಮಠದ ಪ್ರಾಂಗಣದಲ್ಲಿ ರಾಮಾಯಣ ಉದ್ಯಾನ ಮತ್ತು 3ಡಿ– 5ಡಿ ಥಿಯೇಟರ್‌ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದ್ದು, ಒಳಾಂಗಣದ ಕೆಲಸ ಕಾರ್ಯ ಬಾಕಿ ಇವೆ.  ಮುಂಬರುವ ರಾಮನವಮಿಯ ಒಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಸದಸ್ಯ ಅಮ್ಮೆಂಬಳ ನಾಗೇಶ್ ಕಾಮತ್‌,  ಮಂಗಳೂರು ಸಮಿತಿ ಅಧ್ಯಕ್ಷ ಬಸ್ತಿ ಶ್ರೀಪಾದ ಶೆಣೈ, ಉಪಾಧ್ಯಕ್ಷ ಎಸ್‌.ಪಾಂಡುರಂಗ ಆಚಾರ್ಯ ಭಾಗವಹಿಸಿದ್ದರು. 

- ‘ಶ್ರೀರಾಮ ರಥಯಾತ್ರೆ 26ರಂದು ಸಂಪನ್ನ’ ‘

ಮಠಕ್ಕೆ 550 ವರ್ಷ ತುಂಬಿದ ಪ್ರಯುಕ್ತ ಶ್ರೀರಾಮ ತಾರಕ ಮಂತ್ರವನ್ನು 550 ಕೋಟಿಗಿಂತ ಹೆಚ್ಚು ಸಲ ಜಪಿಸಬೇಕು ಎಂದು ಪೀಠಾಧಿಪತಿ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಸಂಕಲ್ಪ ಮಾಡಿದ್ದರು. ಅದರಂತೆ 2024ರ ಏಪ್ರಿಲ್ 17ರಂದು ಆರಂಭಗೊಂಡ  ಸಾರ್ಧ ಪಂಚ ಶತಕೋಟಿ ಶ್ರೀರಾಮ ನಾಮ ಜಪ ಅಭಿಯಾನ ದೇಶದ 120 ಜಪಕೇಂದ್ರ ಹಾಗೂ 104 ಉಪಕೇಂದ್ರಗಳಲ್ಲಿ ಅ.18ರವರೆಗೆ ನಡೆದಿದೆ. ಈ ಸಲುವಾಗಿ ಬದರಿಕಾಶ್ರಮದಿಂದ ಆರಂಭಿಸಲಾದ ಶ್ರೀರಾಮ ರಥಯಾತ್ರೆ ಇದೇ 26ರಂದು ಪರ್ತಗಾಳಿ ಮಠವನ್ನು ತಲುಪಲಿದೆ’ ಎಂದು ಪ್ರದೀಪ್ ಜಿ.ಪೈ ತಿಳಿಸಿದರು.