ADVERTISEMENT

ವಿಜಯಪುರ–ಮಂಗಳೂರು ರೈಲಿನ ವೇಳಾಪಟ್ಟಿಗೆ ಪರಿಷ್ಕರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2022, 15:59 IST
Last Updated 17 ಮೇ 2022, 15:59 IST
ವಿಜಯಪುರ–ಮಂಗಳೂರು ರೈಲು
ವಿಜಯಪುರ–ಮಂಗಳೂರು ರೈಲು   

ಮಂಗಳೂರು: ರಾಜ್ಯದ ಕರಾವಳಿ ಹಾಗೂ ಉತ್ತರ ಕರ್ನಾಟಕವನ್ನು ಸಂಪರ್ಕಿಸಲು ಇರುವ ಏಕೈಕ ರೈಲಿನ ಈಗಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಈ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಎನ್ನುವ ಒತ್ತಾಯ ಬಹುದಿನಗಳಿಂದ ಕೇಳಿ ಬರುತ್ತಲೇ ಇದೆ. ಇದೀಗ ಈ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಲಾಗಿದೆ.

ಮಂಗಳೂರು ಹಾಗೂ ಹುಬ್ಬಳ್ಳಿ ರಾಜ್ಯದ ಪ್ರಮುಖ ನಗರಗಳಾಗಿವೆ. ಎರಡೂ ನಗರಗಳು ವಾಣಿಜ್ಯದ ದೃಷ್ಟಿಯಿಂದ ಪ್ರಮುಖವಾಗಿವೆ. ದಕ್ಷಿಣ ಕನ್ನಡದ ಎನ್‌ಐಟಿಕೆ, ವಿವಿಧ ಆಸ್ಪತ್ರೆಗಳು, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳಿಗೆ ಉತ್ತರ ಕರ್ನಾಟಕದ ಅನೇಕ ಜನರು ಬರುತ್ತಾರೆ.

ಹೀಗಾಗಿ ಉತ್ತರ ಕರ್ನಾಟಕವನ್ನು ಕರಾವಳಿಯ ಜೊತೆಗೆ ಸಂಪರ್ಕಿಸಲು ರೈಲು ಸೇವೆ ಆರಂಭಿಸಬೇಕು ಎನ್ನುವ ಬೇಡಿಕೆ ನಿರಂತರವಾಗಿದೆ. 1990 ರಲ್ಲಿ ಮಂಗಳೂರಿನಿಂದ ಅರಸಿಕೆರೆ– ಹುಬ್ಬಳ್ಳಿ ಮಾರ್ಗವಾಗಿ ಮಿರಜ್‌ಗೆ ಸಂಪರ್ಕಿಸುವ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ನಡೆಸುತ್ತಿತ್ತು. ಗೇಜ್‌ ಪರಿವರ್ತನೆಯ ಸಂದರ್ಭದಲ್ಲಿ ಈ ರೈಲು ಓಡಾಟ ನಿಂತಿದೆ.

ADVERTISEMENT

ಉತ್ತರ ಕರ್ನಾಟಕಕ್ಕೆ ಸಂಪರ್ಕಿಸುವ ರೈಲು ಆರಂಭಿಸುವಂತೆ ಜನರು ಇಟ್ಟಿದ್ದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ 2019 ರಲ್ಲಿ ವಿಜಯಪುರ–ಮಂಗಳೂರು ರೈಲು ಸೇವೆಯನ್ನು ಆರಂಭಿಸಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಇದೆ. 2020 ರಲ್ಲಿ ಕೋವಿಡ್‌–19 ನಿಂದಾಗಿ ಸ್ಥಗಿತವಾಗಿದ್ದ ಈ ರೈಲು, ಇದೀಗ ಮತ್ತೆ ಆರಂಭವಾಗಿದೆ. ಆದರೆ, ಈ ರೈಲಿನ ವೇಳಾಪಟ್ಟಿಯು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ವಿಜಯಪುರ–ಮಂಗಳೂರು ಜಂಕ್ಷನ್‌ (ರೈ.ಸಂ. 07377) ರೈಲು ನಿತ್ಯ ಸಂಜೆ 6.15ಕ್ಕೆ ವಿಜಯಪುರದಿಂದ ಹೊರಡುತ್ತಿದ್ದು, ರಾತ್ರಿ 11.40ಕ್ಕೆ ಹುಬ್ಬಳ್ಳಿಗೆ ಬರುತ್ತದೆ. ರಾತ್ರಿ 11.50ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ ನಿಲ್ದಾಣ ತಲುಪುತ್ತದೆ. ಇನ್ನು ಮಂಗಳೂರು ಜಂಕ್ಷನ್‌–ವಿಜಯಪುರ (ರೈ.ಸಂ. 07378) ರೈಲು ನಿತ್ಯ ಮಧ್ಯಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುತ್ತಿದ್ದು, ಬೆಳಗಿನ ಜಾವ 3.35ಕ್ಕೆ ಹುಬ್ಬಳ್ಳಿಗೆ ತಲುಪುತ್ತದೆ. 3:45ಕ್ಕೆ ಅಲ್ಲಿಂದ ಹೊರಟು, ಬೆಳಿಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ.

12ರಿಂದ 13 ಗಂಟೆಗಳಲ್ಲಿ 782 ಕಿ.ಮೀ. ಕ್ರಮಿಸಬೇಕಾದ ರೈಲು 19 ಗಂಟೆ ತೆಗೆದುಕೊಳ್ಳುತ್ತಿದೆ. ಅಲ್ಲದೇ ಇದು ವಿಶೇಷ ರೈಲಾಗಿದ್ದರಿಂದ ಬೇರೆ ರೈಲುಗಳಿಗೆ ಹೋಲಿಸಿದರೆ ಟಿಕೆಟ್ ದರವೂ ಹೆಚ್ಚು. ಅಲ್ಲದೇ ವೇಳಾಪಟ್ಟಿ ಸರಿ ಇಲ್ಲದೇ ಯಾವುದಕ್ಕೂ ಅನುಕೂಲವಾಗುತ್ತಿಲ್ಲ ಎಂಬುದು ರೈಲ್ವೆ ಪ್ರಯಾಣಿಕರು ದೂರು.

ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಯನ್ನು ರೂಪಿಸಬೇಕು. ಅಲ್ಲದೇ ಈ ರೈಲನ್ನು ಮಂಗಳೂರು ಜಂಕ್ಷನ್‌ ಬದಲು, ಮಂಗಳೂರು ಸೆಂಟ್ರಲ್‌ ನಿಲ್ದಾಣದವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.