ADVERTISEMENT

ದೇವಿಪ್ರಸಾದ್ ಶೆಟ್ಟಿ ವಿರುದ್ಧ ಮಾನನಷ್ಟ ಮೊಕದ್ದಮೆ

ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 18:24 IST
Last Updated 25 ನವೆಂಬರ್ 2019, 18:24 IST
ಪಟ್ಲ ಸತೀಶ್‌ ಶೆಟ್ಟಿ
ಪಟ್ಲ ಸತೀಶ್‌ ಶೆಟ್ಟಿ   

ಮಂಗಳೂರು: ‘ಸಾವಿರಾರು ಜನರ ಮುಂದೆಯೇ ರಂಗಸ್ಥಳದಿಂದ ಕೆಳಕ್ಕಿಳಿಸಿ ಅವಮಾನಿಸಿರುವುದು ಮತ್ತು ಸುಳ್ಳು ಆರೋಪಗಳ ಮೂಲಕ ನನ್ನ ತೇಜೋವಧೆಗೆ ಯತ್ನಿಸುತ್ತಿರುವ ಕಟೀಲು ಯಕ್ಷಗಾನ ಮೇಳದ ಸಂಚಾಲಕ ಕಲ್ಯಾಡಿ ದೇವಿಪ್ರಸಾದ್‌ ಶೆಟ್ಟಿ ಮತ್ತು ಬಳಗದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಭಾಗವತ ಪಟ್ಲ ಸತೀಶ್‌ ಶೆಟ್ಟಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗೆ ಆಗಿರುವ ಅವಮಾನದ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದೇನೆ. ಮಾನನಷ್ಟ ಮೊಕದ್ದಮೆ ಹೂಡುವುದರ ಜೊತೆಯಲ್ಲಿ ಹೈಕೋರ್ಟ್‌ನಲ್ಲೂ ದಾವೆ ಹೂಡುವೆ’ ಎಂದು ಹೇಳಿದರು.

19 ವರ್ಷದಿಂದ ಮೇಳದಲ್ಲಿ ಭಾಗವತನಾಗಿ ಕೆಲಸ ಮಾಡಿದ್ದು, ಈವರೆಗೆ ಯಾವುದೇ ತಪ್ಪನ್ನೂ ಗುರುತಿಸಲು ಯಾರಿಗೂ ಸಾಧ್ಯವಾಗಿಲ್ಲ. 2017ರಲ್ಲಿ ಮೇಳದಿಂದ ಹೊರಹಾಕಿದ ಕಲಾವಿದರ ಪರವಾಗಿ ನ್ಯಾಯ ಕೇಳಿದ್ದಕ್ಕೆ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ದೇವಿಪ್ರಸಾದ್‌ ಶೆಟ್ಟಿ ಅವರ ಅಳಿಯ ಸುಪ್ರೀತ್‌ ರೈ ಈಗ ನಡೆದಿರುವ ಎಲ್ಲ ಘಟನೆಗಳಿಗೆ ಕಾರಣ ಎಂದು ದೂರಿದರು.

ADVERTISEMENT

‘ಕಟೀಲು ಯಕ್ಷಗಾನ ಮೇಳದಲ್ಲಿ ನಿರಂತರವಾಗಿ ಕಲಾವಿದರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ದೌರ್ಜನ್ಯ ತಪ್ಪಿಸುವುದಕ್ಕಾಗಿ ಮೇಳವನ್ನು ಸರ್ಕಾರವೇ ಸುಪರ್ದಿಗೆ ತೆಗೆದುಕೊಳ್ಳಬೇಕು. ಜಿಲ್ಲಾಡಳಿತದ ಅಡಿಯಲ್ಲಿ ಮೇಳ ಕೆಲಸ ಮಾಡಬೇಕು ಎಂಬುದರ ಪರವಾಗಿ ನಾನು ಇದ್ದೇನೆ’ ಎಂದು ಹೇಳಿದರು.

ಪ್ರತಿಭಟನೆ:ಪಟ್ಲ ಸತೀಶ್ ಶೆಟ್ಟಿ ಅವರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಪಟ್ಲಾಭಿಮಾನಿ ಬಳಗದ ನೇತೃತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ ಸೋಮವಾರ ಪ್ರತಿಭಟನಾ ಸಭೆ ನಡೆಯಿತು.

‘ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಹೇಯ ಕೃತ್ಯ. ಡಿಸೆಂಬರ್ 9ರೊಳಗಾಗಿ ಪಟ್ಲ ಅವರನ್ನು ಮತ್ತೆ ಭಾಗವತರಾಗಿ ಗದ್ದುಗೆಯಲ್ಲಿ ಕೂರಿಸಬೇಕು. ಇಲ್ಲದಿದ್ದರೆ, ಘೋರ ದುರಂತ ಕಾದಿದೆ’ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟಿ.ಜಿ. ರಾಜಾರಾಂ ಭಟ್‌ ಎಚ್ಚರಿಕೆ ನೀಡಿದರು.

ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸಿದ್ದರು. ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಭಾಗವತ ರಾಘವೇಂದ್ರ ಮಯ್ಯ, ಕಲಾವಿದರಾರದ ಅಶೋಕ ಶೆಟ್ಟಿ ಸರಪ್ಪಾಡಿ, ಸಂಜಯ್‌ ಕುಮಾರ್ ಗೋಣಿಬೀಡು, ದಿನೇಶ್ ರೈ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.