ಮಂಗಳೂರು: ಆಹಾರಕ್ಕಾಗಿ ಕಡಲನ್ನು ಅವಲಂಬಿಸಿರುವ ಸಾಗರದ ಹಕ್ಕಿಗಳನ್ನು ಗುರುತಿಸುವ ಅಪರೂಪದ ಪೆಲಾಜಿಕ್ ಸಮೀಕ್ಷೆಯಲ್ಲಿ 12 ಜಾತಿಯ ಹಕ್ಕಿಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿವೆ.
ಕರಾವಳಿ ಕರ್ನಾಟಕ ಬರ್ಡ್ ವಾಚರ್ಸ್ ನೆಟ್‌ವರ್ಕ್‌ನ 11 ಸದಸ್ಯರು ಸಮುದ್ರದಲ್ಲಿ ಸುಮಾರು 100 ಕಿ.ಮೀ ಸಾಗಿ ಸಮುದ್ರದ ಮೇಲೆ ಹಾರಾಡುವ ಹಕ್ಕಿಗಳನ್ನು ಗುರುತಿಸಿದ್ದಾರೆ. ಅಪರೂಪದ ಬ್ರೌನ್ ನೋಡ್ಡಿ, ಮಾಸ್ಕ್ಡ್ ಬೂಬಿ, ಲಾಂಗ್ ಟೇಲ್ಡ್ ಜೇಗರ್, ಪಾಮರಿನ್ ಜೇಗರ್, ಪಾರಾಸಿಟಿಕ್ ಜೇಗರ್, ವೈಟ್ ಚೀಕ್ಡ್ ಟರ್ನ್ ಹಾಗೂ ಬ್ರಿಡಲ್ಡ್ ಟರ್ನ್ ಹಕ್ಕಿಗಳು ಕಾಣಸಿಕ್ಕಿವೆ. ಇವುಗಳ ಜೊತೆಗೆ ಸಾಮಾನ್ಯವಾಗಿ ಸಮುದ್ರ ತಟದಲ್ಲಿ ಕಂಡುಬರುವ ಲೆಸ್ಸರ್ ಬ್ಲ್ಯಾಕ್ ಬ್ಯಾಕ್ಡ್ ಗಲ್, ಗ್ರೇಟ್ ಕ್ರೆಸ್ಟೆಡ್ ಟರ್ನ್, ಲೆಸ್ಸರ್ ಕ್ರೆಸ್ಟೆಡ್ ಟರ್ನ್, ಕಾಮನ್ ಟರ್ನ್, ಗಲ್ ಬಿಲ್ಡ್ ಟರ್ನ್, ಲಿಟಲ್ ಟರ್ನ್ ಹಕ್ಕಿಗಳು ಕಂಡುಬಂದಿವೆ.
‘ಬರ್ಡ್ ವಾಚರ್ಸ್ ನೆಟ್‌ವರ್ಕ್ 2012ರಿಂದ ಪ್ರತಿವರ್ಷ ಸಮುದ್ರದ ಹಕ್ಕಿಗಳ ಸಮೀಕ್ಷೆ ನಡೆಸಿ ದಾಖಲಿಸುತ್ತಿದೆ. 2012ರಲ್ಲಿ ಒಂದು ಇಡೀದಿನ ಸಮೀಕ್ಷೆ ನಡೆಸಲಾಗಿತ್ತು. ಆನಂತರದ ವರ್ಷಗಳಲ್ಲಿ ಬೆಳಿಗ್ಗೆ ಹೊರಟು ಸುಮಾರು 50 ಕಿ.ಮೀ ಸಮುದ್ರದಲ್ಲಿ ಸಂಚಾರ ಮಾಡಿ ಹಕ್ಕಿಗಳನ್ನು ಗುರುತಿಸುತ್ತಿದ್ದೆವು. ಈ ಬಾರಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಹೊರಟ 11 ಸದಸ್ಯರು, ಒಬ್ಬರು ಅಡುಗೆಯವರು, ನಾಲ್ವರು ಬೋಟ್ ಸಿಬ್ಬಂದಿ ಒಳಗೊಂಡ ತಂಡವು, 105 ಕಿ.ಮೀ.ವರೆಗೆ ಸಾಗಿ, ರಾತ್ರಿ ಸಮುದ್ರದಲ್ಲೇ ಉಳಿದು, ಭಾನುವಾರ ಸಂಜೆ ಮರಳಿದೆ’ ಎಂದು ತಂಡದ ಸದಸ್ಯ ಪ್ರಶಾಂತ್ ಕೃಷ್ಣ ತಿಳಿಸಿದರು.
‘ಸಮುದ್ರದ ಅಲೆಯ ನಡುವೆ ಬೋಟ್ ತೇಲುತ್ತ ಸಾಗುವಾಗ ಹಕ್ಕಿಗಳನ್ನು ಪತ್ತೆ ಮಾಡುವುದು ಸುಲಭವಲ್ಲ. ಈ ಸವಾಲನ್ನು ಎದುರಿಸಿ ನಮಗೆ 12 ಜಾತಿಯ ಹಕ್ಕಿಗಳನ್ನು ಗುರುತಿಸಲು ಸಾಧ್ಯವಾಯಿತು. ಹಕ್ಕಿಗಳ ಸಂಖ್ಯೆ ಏರಿಳಿತದ ಬಗ್ಗೆ ನಿಖರವಾಗಿ ಹೇಳುವುದು ತುಸು ಕಷ್ಟ. ನಾವು ಸಮೀಕ್ಷೆ ನಡೆಸಿದ ಅವಧಿ ಮಾರ್ಚ್ ಕೊನೆ. ಬೇಸಿಗೆಯ ವಲಸೆ ಅತಿಥಿಗಳು ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳುಗಳಲ್ಲಿ ಬರುತ್ತವೆ. ಸಮುದ್ರದಲ್ಲಿ ಮೀನುಗಳ ಸಂತತಿ ಕುಸಿತವಾಗಿರುವುದರಿಂದ ಹಕ್ಕಿಗಳ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆಯೂ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.