ADVERTISEMENT

‘ತುರ್ತು ಪರಿಸ್ಥಿತಿ ಹೋರಾಟಗಾರರಿಗೂ ಪಿಂಚಣಿ– ಚಿಂತನೆ’

ಬಿಜೆಪಿ ಸಾಧಕರ ಸಮಾವೇಶ * ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಮೆಲುಕು ಹಾಕಿದ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:07 IST
Last Updated 28 ಜೂನ್ 2022, 5:07 IST
ಕಾರ್ಯಕ್ರಮದಲ್ಲಿ ಸನ್ಮಾನ ಪಡೆದ ಕಂಬಳದ ಕೋಣಗಳ ಬಗ್ಗೆ ವೇದವ್ಯಾಸ ಕಾಮತ್‌ ಅವರು ಆರಗ ಜ್ಞಾನೇಂದ್ರ ಅವರಿಗೆ ವಿವರಿಸಿದರು. ಎಂ.ಸುದರ್ಶನ್‌ ಹಾಗೂ ಇತರರು ಇದ್ದಾರೆ
ಕಾರ್ಯಕ್ರಮದಲ್ಲಿ ಸನ್ಮಾನ ಪಡೆದ ಕಂಬಳದ ಕೋಣಗಳ ಬಗ್ಗೆ ವೇದವ್ಯಾಸ ಕಾಮತ್‌ ಅವರು ಆರಗ ಜ್ಞಾನೇಂದ್ರ ಅವರಿಗೆ ವಿವರಿಸಿದರು. ಎಂ.ಸುದರ್ಶನ್‌ ಹಾಗೂ ಇತರರು ಇದ್ದಾರೆ   

ಮಂಗಳೂರು: 'ತುರ್ತು ಪರಿಸ್ಧಿತಿಯ ಸಂದರ್ಭದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಬಡ ಕುಟುಂಬಗಳಿಗೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಹೋರಾಟಗಾರರಿಗೆ ಪಿಂಚಣಿ ನೀಡಬೇಕು ಎಂಬ ಬೇಡಿಕೆ ಇದೆ. ಈಗಲೂ ಸಂಕಷ್ಟ ಎದುರಿಸುತ್ತಿರುವ ಹಾಗೂ ದೇಶದ ಹಿತಕ್ಕಾಗಿ ಬದುಕನ್ನು ಸಮರ್ಪಿಸಿದ ಈ ಹೋರಾಟಗಾರರ ಕುಟುಂಬಗಳಿಗೆ ನೆರವಾಗುವ ಚಿಂತನೆ ಸರ್ಕಾರದ ಮುಂದೆಯೂ ಇದೆ' ಎಂದು ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ತುರ್ತು ಪರಿಸ್ಥಿತಿ ಸಂದರ್ಭದ ಹೋರಾಟಗಾರರನ್ನು ಸನ್ಮಾನಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ 8 ವರ್ಷ ತುಂಬಿದ ಸಂಭ್ರಮಾಚರಣೆ ಸಲುವಾಗಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಧಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿವಮೊಗ್ಗದಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ನಾನೂ ಆ ಸಂದರ್ಭ ಜೆ.ಎಚ್ ಪಟೇಲ್, ಡಿ.ಎಚ್.ಶಂಕರಮೂರ್ತಿ ಜತೆ ಆರು ತಿಂಗಳು ಜೈಲಿನಲ್ಲಿದ್ದೆ’ ಎಂದು ತುರ್ತು ಪರಿಸ್ಥಿತಿಯ ದಿನಗಳನ್ನು ಜ್ಞಾನೇಂದ್ರ ಮೆಲುಕು ಹಾಕಿದರು.

ADVERTISEMENT

‘ಸಂವಿಧಾನ, ಕಾನೂನಿಗಿಂತ ಅತೀತವಾಗಿರುವಂತೆ ವರ್ತಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜನರ ವಾಕ್ ಸ್ವಾತಂತ್ರ್ಯವನ್ನು, ಬದುಕುವ ಹಕ್ಕನ್ನು ಕಸಿದುಕೊಂಡಿದ್ದರು. ಸರ್ಕಾರದ ವಿರುದ್ಧ ಸುದ್ದಿ ಪ್ರಕಟಿಸುತ್ತಿದ್ದ ಪತ್ರಿಕೆಗಳನ್ನು ನಿಷೇಧಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಿಗೆ ಪೊಲೀಸರು ಹಿಂಸೆ ನೀಡಿದ್ದರು. ಇದರಿಂದ ಕೆಲವರು ಅಂಗವಿಕಲರಾದರು. ದೌರ್ಜನ್ಯಕ್ಕೊಳಗಾದ ಅನೇಕ ಕುಟುಂಬಗಳೇ ನಾಶವಾಗಿದ್ದವು’ ಎಂದರು.

ಬಿಜೆಪಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ., ‘ಹಿಂದೆ ದೇಶಕ್ಕಾಗಿ ಜೀವನ ಸಮರ್ಪಣೆ ಮಾಡಿದ ಹೋರಾಟಗಾರರ ತ್ಯಾಗದಿಂದಾಗಿ ತನ್ನನ್ನು ಪ್ರಧಾನ ಸೇವಕ ಎಂದು ಕರೆಯಿಸಿಕೊಳ್ಳುವ ನರೇಂದ್ರ ಮೋದಿ ಅವರಂತಹ ಪ್ರಧಾನಿ ದೇಶಕ್ಕೆ ದೊರೆತಿದ್ದಾರೆ’ ಎಂದರು.

ತುರ್ತು ಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ 27 ಹೋರಾಟಗಾರರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.ಬಿಜೆಪಿಯ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಬಿಜೆಪಿ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೆ, ಮುಖಂಡರಾದ ನಾಗರಾಜ ಶೆಟ್ಟಿ, ಕೆ. ಮೋನಪ್ಪ ಭಂಡಾರಿ, ಪ್ರಭಾಮಾಲಿನಿ,ರೂಪಾ ಡಿ. ಬಂಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.