ADVERTISEMENT

ಅಭಿವೃದ್ಧಿಗಾಗಿ ಸೆಂಟ್‌ಗಟ್ಟಲೆ ಜಾಗ ‘ದಾನ’

ರಸ್ತೆ ವಿಸ್ತರಣೆಗೆ ಸ್ಥಳ ಬಿಟ್ಟುಕೊಟ್ಟವರಿಗೆ ನಗರಪಾಲಿಕೆಯಿಂದ ಟಿಡಿಆರ್‌ ಪ್ರಮಾಣಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 15:08 IST
Last Updated 2 ಜುಲೈ 2022, 15:08 IST
ಕಾರ್ಯಕ್ರಮದಲ್ಲಿ ಟಿಡಿಆರ್ ಪ್ರಮಾಣಪತ್ರ ವಿತರಿಸಲಾಯಿತು. ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಶಾಸಕ ಡಿ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಸುಮಂಗಲ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದಾರೆ
ಕಾರ್ಯಕ್ರಮದಲ್ಲಿ ಟಿಡಿಆರ್ ಪ್ರಮಾಣಪತ್ರ ವಿತರಿಸಲಾಯಿತು. ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಶಾಸಕ ಡಿ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಸುಮಂಗಲ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದಾರೆ   

ಮಂಗಳೂರು: ಎಲ್ಲರ ಮನಸಿನಲ್ಲೂ ಸಂಭ್ರಮ ಮನೆಮಾಡಿತ್ತು. ತಿಂಗಳುಗಳಿಂದ ಕಾಯುತ್ತಿದ್ದ ಅವರಲ್ಲಿ ಧನ್ಯತಾ ಭಾವ ಮೂಡಿತ್ತು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭರವಸೆ ಈಡೇರಿಸಿದ ಖುಷಿಯಲ್ಲಿದ್ದರು.

ಈ ವಿಶೇಷ ಗಳಿಗೆಗೆ ಮಹಾನಗರ ಪಾಲಿಕೆ ಸಭಾಂಗಣ ಶನಿವಾರ ಸಾಕ್ಷಿಯಾಯಿತು. ನಗರದ ಅಭಿವೃದ್ಧಿಯ ಪ್ರಮುಖ ಭಾಗವಾದ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಭೂಮಿ ‘ದಾನ’ ಮಾಡಿದವರಿಗೆ ಟಿಡಿಆರ್‌ (ಟ್ರಾನ್ಸ್‌ಫರೇಬಲ್ ಡೆವಲಪ್‌ಮೆಂಟ್ ರೈಟ್ಸ್‌) ವಿತರಿಸುವ ಕಾರ್ಯಕ್ರಮದಲ್ಲಿ 68 ಮಂದಿಗೆ ಪ್ರಮಾಣಪತ್ರ ನೀಡಲಾಯಿತು.

ಮುಖ್ಯ ರಸ್ತೆಯನ್ನು ಸಮೀಪದ ರಸ್ತೆಗೆ ಸಂಪರ್ಕಿಸುವ ಕಾಮಾಗಾರಿಗಾಗಿ 70 ಸೆಂಟ್ ಜಾಗ ನೀಡಿದವರು, ತಮ್ಮಲ್ಲಿದ್ದ ಒಟ್ಟು ಮೂರು ಸೆಂಟ್‌ ಜಾಗವನ್ನು ಪೂರ್ತಿಯಾಗಿ ಕೊಟ್ಟವರು...ಹೀಗೆ ನಾನಾ ರೀತಿಯಲ್ಲಿ ಸ್ಥಳವನ್ನು ನೀಡಿದವರು ಪ್ರಮಾಣ ಪತ್ರ ಪಡೆದುಕೊಂಡರು.

ADVERTISEMENT

‘ಈಗ ಟಿಡಿಆರ್‌ ಪತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದ್ದು ಮಾರುಕಟ್ಟೆಯಲ್ಲಿ ಷೇರು ಹೂಡುವಂತೆ ಇದನ್ನು ಕೂಡ ಬಳಸಿಕೊಳ್ಳಬಹುದು’ ಎಂದು ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್‌ ‘ನಿಯಮದಲ್ಲಿ ಬದಲಾವಣೆ ಆದ ಕಾರಣ ಟಿಡಿಆರ್ ವಿತರಣೆ ವಿಳಂಬವಾಗಿದೆ. ಕೆಲವರ ಪ್ರಮಾಣಪತ್ರಗಳು ಇನ್ನೂ ಸಿದ್ಧವಾಗಿಲ್ಲ. ಶೀಘ್ರದಲ್ಲೇ ಅವುಗಳನ್ನು ವಿತರಿಸಲಾಗುವುದು’ ಎಂದರು.

ಉಪಮೇಯರ್ ಸುಮಂಗಲಾ ಇದ್ದರು.

ನಗರದಲ್ಲಿ ನೀರಿನ ದರ ಕಡಿತ?

ಕಾರ್ಯಕ್ರಮದ ನಡುವೆ ಬಂದ ದೂರವಾಣಿ ಕರೆ ಸ್ವೀಕಿರಿಸಿದ ಶಾಸಕ ವೇದವ್ಯಾಸ ಕಾಮತ್ ಕರೆ ಮುಗಿದ ತಕ್ಷಣ ‘ಸಿಹಿ ಸುದ್ದಿ ಇದೆ‘ ಎಂದು ಹೇಳಿ, ‘ನಗರದಲ್ಲಿ ನೀರಿನ ದರ ಕಡಿಮೆ ಮಾಡಲು ಈ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಫಲ ಸಿಕ್ಕಿದೆ’ ಎಂದು ಹೇಳಿದರು. ಇದನ್ನು ಕೇಳಿದ ಎಲ್ಲರೂ ನೀರಿನ ದರ ಕಡಿಮೆ ಆಗಿದೆ ಎಂಬ ವಿಷಯ ಘೋಷಿಸುತ್ತಾರೆ ಏಂಬ ನಿರೀಕ್ಷೆಯಲ್ಲಿದ್ದರು. ಆದರೆ ಮಾತು ಮುಂದುವರಿಸಿದ ಶಾಸಕರು ‘ಪ್ರಸ್ತಾವಕ್ಕೆ ಸರ್ಕಾರ ಪೂಕರವಾಗಿ ಸ್ಪಂದಿಸಿದ್ದು ಮೌಖಿಕವಾಗಿ ಒಪ್ಪಿಕೊಂಡಿದೆ. ದರ ಕಡಿಮೆ ಮಾಡುವ ಸಾಧ್ಯತೆ ಇದೆ’ ಎಂದು ಹೇಳಿದಾಗ ಎಲ್ಲರೂ ಸಪ್ಪೆಯಾದರು. ‘ಹೊಸ ದರ ಜಾರಿಗೆ ಬಂದರೆ ಸಾವಿರ ಲೀಟರ್ ನೀರಿಗೆ ₹ 5ರಂತೆ ನೀಡಿದರೆ ಸಾಕಾಗುತ್ತದೆ’ ಎಂದು ಶಾಸಕರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.