ADVERTISEMENT

ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ: ರೌಡಿ ಶೀಟರ್‌ ಬಂಧನ

ಆರೋಪಿಯ ಪತ್ನಿಯಿಂದಲೇ ಠಾಣೆಯಲ್ಲಿ ದೂರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 4:54 IST
Last Updated 2 ಡಿಸೆಂಬರ್ 2021, 4:54 IST
ಉಪ್ಪಿನಂಗಡಿ ಸಮೀಪ ಬೊಳ್ಳಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮುಳುಗಿದ ವ್ಯಕ್ತಿಗಾಗಿ ಬುಧವಾರ ಸಂಜೆಯವರೆಗೂ ಹುಡುಕಾಟ ನಡೆಯಿತು
ಉಪ್ಪಿನಂಗಡಿ ಸಮೀಪ ಬೊಳ್ಳಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮುಳುಗಿದ ವ್ಯಕ್ತಿಗಾಗಿ ಬುಧವಾರ ಸಂಜೆಯವರೆಗೂ ಹುಡುಕಾಟ ನಡೆಯಿತು   

ಮಂಗಳೂರು: ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರೌಡಿ ಶೀಟರ್‌ನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕದ್ರಿ ನಿವಾಸಿಯಾಗಿದ್ದ ಆರೋಪಿ ನಿತ್ಯವೂ ಕುಡಿದು ಬಂದು ಹೆಂಡತಿ ಹಾಗೂ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಒಂದನೇ ತರಗತಿಯಲ್ಲಿ ಓದುತ್ತಿದ್ದ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಲಾಗಿದೆ. ಮಗು ಮತ್ತು ತನ್ನ ತಾಯಿ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಿ ಬೇಸತ್ತಿದ್ದ ಆರೋಪಿಯ ಪತ್ನಿ,
ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಆಹಾರ ಪೂರೈಕೆ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ಮೀನುಗಾರನ ಶವ ಪತ್ತೆ

ADVERTISEMENT

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟಿದ್ದು, ಆತನ ಮೃತದೇಹ ಬುಧವಾರ ಪತ್ತೆಯಾಗಿದೆ.

ಆಂಧ್ರಪ್ರದೇಶದ ಮಲ್ಲಪಲ್ಲಿ ಅಪ್ಪಯ್ಯ (36) ಮೃತ ಮೀನುಗಾರ. ಮಂಗಳವಾರ ಸಂಜೆ ಹಳೆಯ ಬಂದರಿ
ನಿಂದ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಮಲ್ಲಪಲ್ಲಿ ಅಪ್ಪಯ್ಯನ ಮೃತದೇಹ ಬಂದರ್ ದಕ್ಕೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬ್ಯಾಟರಿ ಕಳವು: ಬಂಧನ

ಕೊಣಾಜೆ: ಲಾರಿಗಳ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಕೊಣಾಜೆ ಪೊಲೀಸರು, ₹ 2.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಡಬ ತಾಲ್ಲೂಕಿನ ಕುಂತ್ತೂರು ಪೆರಬೆಯ ರಾಜೇಶ್ ಕೆ., ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದ ಸಿನಾನ್ ಬಂಧಿತರು. ಇತ್ತೀಚೆಗೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಟರಿ ಕಳವು ಮಾಡಿದ್ದ ಪ್ರಕರಣ ದಾಖಲಾಗಿತ್ತು.

ಮಹಮ್ಮದ್ ಶರೀಫ್ ಅವರು ಕುರ್ನಾಡು ಮಿತ್ತಕೋಡಿಯಲ್ಲಿ ಸೈಟ್‌ನಲ್ಲಿ ನಿಲ್ಲಿಸಿದ್ದ ಲಾರಿ, ಹಿಟಾಚಿ ಮತು ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು.

ಬುಧವಾರ ಆರೋಪಿಗಳು ಟಾಟಾ ಏಸ್ ವಾಹನದಲ್ಲಿ 10 ಬ್ಯಾಟರಿಗಳನ್ನು ಮಾರಾಟ ಮಾಡಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಕೊಣಾಜೆ ಪೊಲೀಸರಿಗೆ ದೊರೆತಿತ್ತು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಬಾಳೆಪುಣಿ ಗ್ರಾಮದ ಸುಟ್ಪಾಡಿ ಕ್ರಾಸ್ ಬಳಿ ಟಾಟಾ ಏಸ್ ವಾಹನವನ್ನು ತಡೆದು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ

ಉಳ್ಳಾಲ: ತಲಪಾಡಿ ಚೆಕ್‌ಪೋಸ್ಟ್ ಕಡೆಯಿಂದ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟರ್ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇಲೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ಆಧಾರದಲ್ಲಿ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. 14ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ತಂಗಿಯೊಂದಿಗೆ ತಲಪಾಡಿ ಅಲಂಕಾರ ಗುಡ್ಡೆಯಿಂದ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಆರೋಪಿ, ಬಾಲಕಿಯ ಕೈ ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ. ಹೆದರಿದ ಬಾಲಕಿ ಬೊಬ್ಬೆ ಹಾಕಿದ್ದಾಳೆ. ಜನ ಸೇರಿದ್ದರಿಂದ ಸ್ಕೂಟರ್ ಸವಾರ ಪರಾರಿಯಾಗಿದ್ದಾನೆ.

ಉಳ್ಳಾಲ ಠಾಣೆ ಇನ್‌ಸ್ಪೆಕ್ಟರ್ ಸಂದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಾಲಕ ಸಾವು

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ, ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಪಿಕ್ ಅಪ್ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಡಪದವು ಕನ್ನೊಳಿ ನಿವಾಸಿ ಯಾದವ (38) ಮೃತಪಟ್ಟವರು. ಮಂಗಳವಾರ ರಾತ್ರಿ ಮೂಡುಬಿದಿರೆಯಿಂದ ಎಡಪದವಿಗೆ ಪಿಕ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಹಂಡೇಲು ಸುತ್ತು ತಲುಪುವಾಗ ತಾಂತ್ರಿಕ ದೋಷದಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ಹತ್ತಿರದ ತೆಂಗಿನಮರಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಯಾದವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.