ಮಂಗಳೂರು: ಪೌರಕಾರ್ಮಿಕರ ಹೆಸರನ್ನು ದುರ್ಬಳಕೆ ಮಾಡಿ ನಗರದ ಕೆಲ ಬ್ಯಾಂಕ್‌ನಲ್ಲಿ ಸಾಲ ಪಡೆದು ವಂಚಿಸಲಾಗಿದೆ. ಪಾಲಿಕೆ ಆಯುಕ್ತರ ಹಾಗೂ ಆರೋಗ್ಯ ಅಧಿಕಾರಿಯ ನಕಲಿ ಸಹಿ, ನಕಲಿ ವೇತನ ಚೀಟಿ, ನಕಲಿ ಮೊಹರು ಬಳಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಈ ವಂಚನೆ ನಡೆಸಲಾಗಿದೆ. ಯಾರೋ ಮಾಡಿದ ಈ ವಂಚನೆಯಿಂದ ನೈಜ ಪೌರಕಾರ್ಮಿಕರಿಗೂ ಬ್ಯಾಂಕ್‌ನಲ್ಲಿ ಸಾಲ ಸಿಗದ ಸ್ಥಿತಿ ಎದುರಾಗಿದೆ ಎಂದು ಪರಿಶಿಷ್ಟ ಜಾತಿಯ ಮುಖಂಡರು ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಹವಾಲು ಆಲಿಸಲು ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಪರಿಶಿಷ್ಟ ಜಾತಿಯ ಮುಖಂಡ ಅನಿಲ್ ಕುಮಾರ್ ಈ ಬಗ್ಗೆ ಗಮನ ಸೆಳೆದರು.
‘ಬ್ಯಾಂಕ್ ಸಾಲಕ್ಕಾಗಿ ಪಾಲಿಕೆಯ ಕೆಲ ಪೌರ ಕಾರ್ಮಿಕರು ಅರ್ಜಿ ಸಲ್ಲಿಸಿದಾಗ ಆ ಬ್ಯಾಂಕಿನ ಅಧಿಕಾರಿ ಈಗಾಗಲೇ ಹಲವು ಪೌರ ಕಾರ್ಮಿಕರು ಸಾಲ ಪಡೆದು ವಂಚಿಸಿರುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಸಂಶಯ ಬಂದು ದಲಿತ ಮುಖಂಡ ವಿಶು ಕುಮಾರ್ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಈ ರಿತಿ ವಂಚನೆ ನಡೆದಿದ್ದು ಗೊತ್ತಾಗಿದೆ. ಪೌರಕಾರ್ಮಿಕರೇ ಅಲ್ಲದವರು, ಪಾಲಿಕೆಯ ಸಿಬ್ಬಂದಿಯೇ ಅಲ್ಲದವರು ಈ ರೀತಿ ಸಾಲ ಪಡೆದಿದ್ದಾರೆ. ಸಾಲ ಕೊಡಿಸಿದವರು ₹ 20 ಸಾವಿರದಿಂದ ₹ ₹50 ಸಾವಿರದವರೆಗೆ ಕಮಿಷನ್ ಪಡೆದ ಮಾಹಿತಿ ಇದೆ’ ಎಂದರು.
‘ಜಿಲ್ಲೆಯ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕರೊಬ್ಬರು ಅರ್ಜಿ ವಿಲೇ ಮಾಡುವಾಗ ಪಾಲಿಕೆ ಆಯುಕ್ತರಿಂದ ವೇತನ ದೃಢೀರಣ ಪತ್ರ ಪಡೆದು ಸಲ್ಲಿಸುವಂತೆ ಕೇಳಿದ್ದಾರೆ. ಆದರೆ, ಸಹಕಾರಿ ಬ್ಯಾಂಕಿಗೆ ಸಲ್ಲಿಸಲಾದ ದಾಖಲೆಗಳೂ ನಕಲಿ. ಸಾಲದ ಅರ್ಜಿಗಳಲ್ಲಿದ್ದ ಹೆಸರಿನವರು ಯಾರೂ ಪಾಲಿಕೆಯ ಪೌರ ಕಾರ್ಮಿಕರಲ್ಲ ಎಂದು ಪಾಲಿಕೆ ಆಯುಕ್ತರೇ ಬ್ಯಾಂಕಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ’ ಎಂದರು.
‘ಉಳ್ಳಾಲ ತಾಲ್ಲೂಕಿನ ಬಾಳೆಪುಣಿ ಗ್ರಾಮದಲ್ಲಿ ಬಾಬು ಕೊರಗ 1 ಎಕರೆ ಕೃಷಿ ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ಕೋರಿದ್ದ ಜಮೀನು ಗೋಮಾಳ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೆ ಅದೇ ಜಾಗದಲ್ಲಿ ಇತರರಿಗೆ ಕೃಷಿ ಜಮೀನು ಮಂಜೂರು ಆಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಲಿ’ ಎಂದು ಮುಖಂಡ ಎಸ್.ಪಿ. ಆನಂದ ಒತ್ತಾಯಿಸಿದರು.
ಖಾಸಗಿ ಐಟಿಐ ಪ್ರಾಂಶುಪಾಲರೊಬ್ಬರು ಅದೇ ಸಂಸ್ಥೆಯ ಉಪನ್ಯಾಸಕರನ್ನು ವಂಚಿಸಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿ ಮಿಥುನ್ ಸೂಚಿಸಿದರು.
ಡಿಸಿಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವಿಶಂಕರ್ ಭಾಗವಹಿಸಿದ್ದರು. ಇನ್‌ಸ್ಪೆಕ್ಟರ್ ನಾಗರಾಜ್ ಸ್ವಾಗತಿಸಿ, ಹಿಂದಿನ ಸಭೆಯ ನಡಾವಳಿಯ ವಿವರ ನೀಡಿದರು. ಇನ್‌ಸ್ಪೆಕ್ಟರ್ ಮುಹಮ್ಮದ್ ಸಲೀಂ ಧನ್ಯವಾದ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.