ADVERTISEMENT

ವಂಶೋದಯ-ಕ್ಕೆ ‘ಇತಿಶ್ರೀ’ ಹಾಡಿ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕರೆ

ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಮೇ 2019, 17:14 IST
Last Updated 2 ಮೇ 2019, 17:14 IST
ಮಂಗಳೂರಿನ ಕಲಾವಿದ ಚಿತ್ರಮಿತ್ರ ಅವರು ರಚಿಸಿದ ಮೋದಿ ಅವರ ತಾಯಿ ಹೀರಾಬೆನ್‌ ಅವರ ಚಿತ್ರವನ್ನು ಮೋದಿ ಅವರಿಗೆ ನೀಡಲಾಯಿತು
ಮಂಗಳೂರಿನ ಕಲಾವಿದ ಚಿತ್ರಮಿತ್ರ ಅವರು ರಚಿಸಿದ ಮೋದಿ ಅವರ ತಾಯಿ ಹೀರಾಬೆನ್‌ ಅವರ ಚಿತ್ರವನ್ನು ಮೋದಿ ಅವರಿಗೆ ನೀಡಲಾಯಿತು   

ಮಂಗಳೂರು:ರಾಜ್ಯದ ಮೈತ್ರಿ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈಗ ನಡೆಯುತ್ತಿರುವ ಚುನಾವಣೆ ವಂಶೋದಯ ಮತ್ತು ಅಂತ್ಯೋದಯದ ನಡುವಿನದ್ದು ಎಂದು ಅಭಿಪ್ರಾಯ ಪಟ್ಟರು.

ಮಂಗಳೂರಿನಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕುಟುಂಬದ ಕೊನೆಯ ಕುಡಿಗೂ ಅಧಿಕಾರ ಸಿಗಬೇಕು ಎನ್ನು
ವುದು ವಂಶೋಯದ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವರ ಅಧಿಕಾರ ಕೊಡಿಸುವುದು ಅಂತ್ಯೋದಯದ ಧ್ಯೇಯ. ನಮ್ಮದು ಅಂತ್ಯೋದಯ, ವಿರೋಧ ಪಕ್ಷಗಳದ್ದು ವಂಶೋದಯ’ ಎಂದು ಟೀಕಿಸಿದರು.

‘ವಂಶೋದಯದಲ್ಲಿ ಕುಟುಂಬ ದವರಿಗೇ ಅಧಿಕಾರ ಸಿಗುತ್ತದೆ. ಅಂತ್ಯೋದಯಲ್ಲಿ ಚಾಯವಾಲಾ ಕೂಡ ಪ್ರಧಾನಿ ಆಗುತ್ತಾನೆ. ಅವರದ್ದು ತುಷ್ಟೀಕರಣರಾಜಕೀಯ. ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ತಿಳಿಸಿದರು.

ADVERTISEMENT

‘ಗುಡ್ಡಗಾಡು ಪ್ರದೇಶ, ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸಿದವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬಹುದು ಎಂದು ಐದು ವರ್ಷದ ಹಿಂದೆ
ಯಾರೂ ನಿರೀಕ್ಷಿಸಿರಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಹರಿದ ಚಪ್ಪಲಿ ಹಾಕಿಕೊಂಡು ಬಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದನ್ನು ನೋಡಿ
ದರೆ, ಅದುವೇ ನಿಜವಾದ ಭಾರತ ಎಂಬುದು ಗೊತ್ತಾಗುತ್ತದೆ’ ಎಂದು ಸಾಲುಮರದ ತಿಮ್ಮಕ್ಕ ಅವರ ಹೆಸರು ಪ್ರಸ್ತಾಪಿಸದೇ ಮೋದಿ ಹೇಳಿದರು.

ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ: ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲಾಗಿದೆ. ಮೇ 23 ರಂದು ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮೀನುಗಾರಿಕೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.

ಸ್ಥಿರ ಸರ್ಕಾರದ ಮಂತ್ರ: ದೇಶದಲ್ಲಿ ಮಜಬೂರ್ ಸರ್ಕಾರ ಬೇಕಾಗಿಲ್ಲ. ಮಜಬೂತ್‌ ಸರ್ಕಾರ ಬೇಕು. ಕರ್ನಾಟಕದಲ್ಲಿ ಮಾಡಿದ ತಪ್ಪನ್ನು ಲೋಕಸಭೆ ಚುನಾವಣೆಯಲ್ಲೂ ಮಾಡಬೇಡಿ ಎಂದು ಮೋದಿ ಸೇರಿದ್ದ ಜನಸ್ತೋಮಕ್ಕೆ ಮನವಿ ಮಾಡಿದರು.

ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್–ಜೆಡಿಎಸ್‌ ಒಳ್ಳೆಯ ಆಡಳಿತ ನೀಡುತ್ತಿಲ್ಲ. ಇಂತಹ ಪರಿಸ್ಥಿತಿ ದೇಶದಲ್ಲಿ ಬರಬಾರದು ಎಂದು ಹೇಳಿದರು.

ತಪ್ಪು ಮಾಡಿಲ್ಲ ಎಂದಾದರೆ ಭಯ ಏಕೆ: ಬೆಂಗಳೂರಿನ ಮೈದಾನದಲ್ಲಿ ಮಾತನಾಡಿದ ಮೋದಿ, ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಟೀಕಿಸಿದ ಮೋದಿ, ‘ನೀವು ತಪ್ಪು ಮಾಡಿಲ್ಲ ಎಂದಾದರೆ ಭಯ ಏಕೆ’ ಎಂದು ಪ್ರಶ್ನಿಸಿದರು.

‘ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶದಂತೆ ಸಾಮಾನ್ಯ ಪೊಲೀಸರ ಎದುರು ಸಮಾಧಾನದಿಂದ ವಿಚಾರಣೆಗೆ ಹಾಜರಾಗಿದ್ದೆ’ ಎಂದರು.

‘ಕಾಂಗ್ರೆಸ್‌ನ ಪ್ರೊಸೆಸರ್‌ ಯಾವತ್ತಿಗೂ ವೇಗವಾಗಿ ಕಾರ್ಯವಹಿಸುವುದಿಲ್ಲ. ಅದರ ಸಾಫ್ಟ್‌ವೇರ್‌ ಹಾಳಾಗಿದೆ. ಅದರ ಚುನಾವಣಾ ಪ್ರಣಾಳಿಕೆ ಡಕೋಸ್ಲಾ (ಸುಳ್ಳಿನ ಪತ್ರ)’ ಎಂದು ವ್ಯಂಗ್ಯವಾಡಿದರು.

‘ದೇಶ ದ್ರೋಹದ ಕಾನೂನು ತೆಗೆದುಹಾಕುತ್ತೇವೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಯೋಧರ ಮೇಲೆ ಉಗ್ರನೊಬ್ಬ ಕಲ್ಲು ಹೊಡೆದರೆ, ಅದು ದೇಶದ್ರೋಹ ಅಲ್ಲವೇ? ಅವರನ್ನು ನಿಯಂತ್ರಿಸುವುದು ಬೇಡವೇ? ಇಂಥ ಕಾನೂನು ಇಲ್ಲದಂತೆ ಮಾಡುವ ಕಾಂಗ್ರೆಸ್‌ನ್ನು ನೀವು ಬೆಂಬಲಿಸುವಿರಾ? ಎಂದು ಪ್ರಶ್ನಿಸಿದರು.

‘ಸರ್ಜಿಕಲ್‌ ಸ್ಟ್ರೈಕ್‌, ವಾಯುದಾಳಿ, ಉಪಗ್ರಹ ನಿಗ್ರಹ ಪರೀಕ್ಷೆಗಳನ್ನು ಮಾಡಿದೆವು. ಈಗ ಇಡೀ ಜಗತ್ತು ನಮ್ಮ ಜತೆಗಿದೆ. ಹಿಂದೆ ರಷ್ಯಾ ನಮ್ಮೊಂದಿತ್ತು. ಇಡೀ ಜಗತ್ತು ಪಾಕಿಸ್ತಾನದೊಂದಿಗಿತ್ತು. ಇಂದು ಪಾಕಿಸ್ತಾನ ಮತ್ತು ಚೀನಾ ಒಂದಾಗಿವೆ. ಆದರೆ, ಇಡೀ ಜಗತ್ತು ನಮ್ಮೊಂದಿಗಿದೆ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.