ADVERTISEMENT

ಮಂಗಳೂರು: 16 ಶಾಲೆಗಳಿಗೆ ‘ಪಿಎಂಶ್ರೀ ಶಾಲೆ’ ಭಾಗ್ಯ

ಉಭಯ ಜಿಲ್ಲೆಗಳ ಸರ್ಕಾರಿ ಶಾಲೆಗಳು ಆಯ್ಕೆ, ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು

ಸಂಧ್ಯಾ ಹೆಗಡೆ
Published 27 ಮಾರ್ಚ್ 2024, 6:13 IST
Last Updated 27 ಮಾರ್ಚ್ 2024, 6:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಕೇಂದ್ರ ಸರ್ಕಾರದ ‘ಪಿಎಂಶ್ರೀ ಶಾಲೆ’ ಯೋಜನೆಗೆ ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಲೆಗಳು ಆಯ್ಕೆಯಾಗಿವೆ.

ದೇಶದಲ್ಲಿ ಒಟ್ಟು 14,500 ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ ಕರ್ನಾಟಕದ 129 ಶಾಲೆಗಳು ಸೇರಿದಂತೆ ಒಟ್ಟು 6,207 ಶಾಲೆಗಳನ್ನು ಆಯ್ಕೆ ಮಾಡಿತ್ತು. ಎರಡನೇ ಹಂತದಲ್ಲಿ ರಾಜ್ಯದ 245 ಶಾಲೆಗಳು ಪಿಎಂಶ್ರೀಗೆ ಆಯ್ಕೆಯಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಲಾ ಎಂಟು ಶಾಲೆಗಳು ಒಳಗೊಂಡಿವೆ.

ADVERTISEMENT

‘ಮೊದಲ ಹಂತದಲ್ಲಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರೌಢಶಾಲೆಗಳು, ಐದು ಪ್ರಾಥಮಿಕ ಶಾಲೆಗಳಿಗೆ ಪ್ರಥಮ, ದ್ವಿತೀಯ ಕಂತಿನ ಅನುದಾನ ದೊರೆತಿದೆ. ಮೂರು ಮತ್ತು ನಾಲ್ಕನೇ ಕಂತಿನ ಹಣ ಬರಬೇಕಾಗಿದೆ. ಈವರೆಗೆ ಒಟ್ಟು ₹1.53 ಕೋಟಿ ಅನುದಾನ ಜಿಲ್ಲೆಗೆ ಬಂದಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ’ ಎಂದು ಡಿಡಿಪಿಐ ವೆಂಕಟೇಶ ಪಟಗಾರ್ ತಿಳಿಸಿದರು.

‘ಈ ಬಾರಿ ಜಿಲ್ಲೆಯ 18 ಶಾಲೆಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಎಂಟು ಶಾಲೆಗಳು ಆಯ್ಕೆಯಾಗಿವೆ. ಇವುಗಳಲ್ಲಿ ಬಂಟ್ವಾಳ ತಾಲ್ಲೂಕಿನ ಮೂರು, ಉಳ್ಳಾಲ ತಾಲ್ಲೂಕಿನ ಎರಡು, ಮೂಲ್ಕಿ, ಮೂಡುಬಿದಿರೆ ಮತ್ತು ಪುತ್ತೂರು ತಾಲ್ಲೂಕಿನ ತಲಾ ಒಂದು ಶಾಲೆಗಳು ಒಳಗೊಂಡಿವೆ. ಆಯ್ಕೆಯಾಗಿರುವ ಶಾಲೆಗಳ ಅಗತ್ಯ ಗಮನಿಸಿ ಕ್ರಿಯಾಯೋಜನೆ ಸಿದ್ಧಪಡಿಸಬೇಕಾಗಿದೆ’ ಎಂದು ‘ಪ್ರಜಾವಾಣಿ’ಗೆ ಅವರು ಪ್ರತಿಕ್ರಿಯಿಸಿದರು.

ಕಸ ನಿರ್ವಹಣೆ, ಮಳೆನೀರು ಕೊಯ್ಲು, ಸ್ಮಾರ್ಟ್ ತರಗತಿಗಳು, ಸೌರಫಲಕ, ಡಿಜಿಟಲ್ ಗ್ರಂಥಾಲಯ, ಕಟ್ಟಡ ದುರಸ್ತಿ, ಬೋಧನೆಗೆ ಗಣಿತ, ವಿಜ್ಞಾನ ಕಿಟ್‌ಗಳು ಸೇರಿದಂತೆ ನೂರಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಿ ಅನುದಾನ ಮಂಜೂರು ಆಗುತ್ತದೆ. ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಮೂಲ ಸೌಕರ್ಯ ಹೆಚ್ಚಿಸುವುದು ಈ ಯೋಜನೆಯ ಗುರಿ. ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಶಾಲೆಗಳ ಸೌಕರ್ಯದಲ್ಲಿ ಗಣನೀಯ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆಯನ್ನು ಇನ್ನೆರಡು ವರ್ಷಗಳಲ್ಲಿ ಗಮನಿಸಬಹುದು ಎಂದು ಅವರು ವಿವರಿಸಿದರು.

‘ಕೇಂದ್ರ ಸರ್ಕಾರದ ಈ ಯೋಜನೆಗೆ ರಾಜ್ಯ ಸರ್ಕಾರ ಕೂಡ ತನ್ನ ಪಾಲನ್ನು ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನವೂ ಈ ಯೋಜನೆಯಲ್ಲಿ ಒಳಗೊಂಡಿದೆ. ಐದು ವರ್ಷಗಳ ಕಾರ್ಯಕ್ರಮ ಇದಾಗಿದ್ದು, ಪೂರ್ಣಗೊಳ್ಳುವ ವೇಳೆಗೆ ಮಗುವಿನ ಶಿಕ್ಷಣಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳು ಶಾಲೆಯಲ್ಲಿ ದೊರಕಲಿವೆ. ಇದರಿಂದ ದಾಖಲಾತಿ ಹೆಚ್ಚಳವೂ ಸಾಧ್ಯವಾಗಲಿದೆ’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.