ಬಂಟ್ವಾಳ: ಒಂದು ತಿಂಗಳಿಡೀ ಜಾತ್ರೆ ನಡೆಯುವ ಅಪರೂಪದ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ 105 ವರ್ಷಗಳ ಬಳಿಕ ಶತ ಚಂಡಿಕಾಯಾಗ ಬುಧವಾರ ಸಂಭ್ರಮದಿಂದ ನೆರವೇರಿತು.
ಪೊಳಲಿ ಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ನಡೆದ ಚಂಡಿಕಾಯಾಗದಲ್ಲಿ, ಬೆಳಿಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ಉಪಹಾರ ಮತ್ತು ಅನ್ನಸಂತರ್ಪಣೆ ನಡೆಯಿತು. ಯಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ‘ಶತ ಚಂಡಿಕಾಯಾಗವು ಈ ಹಿಂದೆ ನಡೆದ ಬ್ರಹ್ಮಕಲಶೋತ್ಸವವನ್ನು ನೆನಪಿಸುವಂತಿತ್ತು’ ಎಂದು ಅನ್ನಸಂತರ್ಪಣೆ ವಿಭಾಗದ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.
‘ಲೋಕ ಕಲ್ಯಾಣ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ಬುಧವಾರ ನಡೆದ ಶತಚಂಡಿಕಾಯಾಗ ಮತ್ತು ಗುರುವಾರ (ಮಾ.6) ನಡೆಯಲಿರುವ ‘ದೊಡ್ಡ ರಂಗ ಪೂಜೆ ಉತ್ಸವ’ ದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸಾವಿರಾರು ಮಂದಿ ಹೆಸರು ನೊಂದಾಯಿಸಿಕೊಂಡು ಭಕ್ತಿಯಿಂದ ಪಾಲ್ಗೊಂಡಿದ್ದಾರೆ’ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಹೇಳಿದರು.
ಮಾ.1ರಿಂದಲೇ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ, ನವಾಕ್ಷರೀ ಜಪ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ, ಶ್ರೀಚಕ್ರಪೂಜೆ, ಕಾಳಿ ಸಹಸ್ರನಾಮ ಹೋಮ, ಮಂಟಪ ಸಂಸ್ಕಾರ, ಪ್ರಾಸಾದ ಶುದ್ಧಿ ರಾಕ್ಷೊಘ್ನ ಹೋಮ, ವಾಸ್ತು ಹೋಮ, ಅಗ್ನಿ ಜನನ ಸಂಸ್ಕಾರ ಮತ್ತಿತರ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು. ಗುರುವಾರ ಬೆಳಿಗ್ಗೆ ಗಂಟೆ 7.30ರಿಂದ ಗಣಪತಿ ಹೋಮ, ಕಲಶಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 6.30ಕ್ಕೆ ಮಹಾಪೂಜೆ, 7.30ಕ್ಕೆ ದೊಡ್ಡ ರಂಗಪೂಜೆ, 8.30ರಿಂದ ದೇವರ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ ಮತ್ತು ಪಲ್ಲಕಿ ಉತ್ಸವ ನಡೆಯಲಿದೆ’ ಎಂದು ಪೊಳಲಿ ಕೃಷ್ಣ ತಂತ್ರಿ ಹೇಳಿದರು.
ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ, ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಅಸ್ರಣ್ಣ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಮಾಜಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ, ಉದ್ಯಮಿ ಶಶಿಧರ ಶೆಟ್ಟಿ, ರೋಹಿತ್ ಶೆಟ್ಡಿ ನಗ್ರಿಗುತ್ತು, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಮಂಜಯ ಶೆಟ್ಟಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.