ADVERTISEMENT

ತಪಾಸಣೆ ವೇಳೆ ಮೂಲಪ್ರತಿ ಇಲ್ಲದಿದ್ದರೆ ದಂಡ

ವಾಹನ ಸವಾರರಿಗೆ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 12:05 IST
Last Updated 30 ನವೆಂಬರ್ 2019, 12:05 IST
ಡಾ.ಪಿ.ಎಸ್‌.ಹರ್ಷ
ಡಾ.ಪಿ.ಎಸ್‌.ಹರ್ಷ   

ಮಂಗಳೂರು: ಚಾಲಕರು ವಾಹನದ ಮೂಲ ದಾಖಲೆಗಳನ್ನು ಸದಾ ತಮ್ಮೊಂದಿಗೆ ಇರಿಸಿಕೊಳ್ಳಬೇಕು. ಪೊಲೀಸರ ತಪಾಸಣೆ ವೇಳೆ ನಕಲು ಪ್ರತಿಗಳನ್ನು ಹಾಜರುಪಡಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಎಚ್ಚರಿಕೆ ನೀಡಿದರು.

ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಕರೆಮಾಡಿದ ನಾಗರಿಕರೊಬ್ಬರು, ‘ತಪಾಸಣೆ ವೇಳೆ ನಕಲು ಪ್ರತಿ ಹಾಜರುಪಡಿಸಿದರೂ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಇದರಿಂದ ತೊಂದರೆ ಆಗುತ್ತಿದೆ. ಮೂಲ ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಅವರಿಗೆ ಉತ್ತರಿಸಿದ ಕಮಿಷನರ್‌, ‘ಈಗ ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆ ಜಾರಿಯಾಗಿದೆ. ಅದರ ಪ್ರಕಾರ, ನಕಲು ಪ್ರತಿಗಳನ್ನು ಮಾನ್ಯ ಮಾಡುವಂತಿಲ್ಲ. ಜನರು ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪೊಲೀಸರಿಗೆ ಸಹಕಾರ ನೀಡಬೇಕು. ವಾಹನದೊಂದಿಗೆ ಯಾವಾಗಲೂ ಮೂಲ ದಾಖಲೆಗಳನ್ನು ಇರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಬದಲಿ ಸ್ಥಳದಲ್ಲಿ ಅವಕಾಶ:

‘ಕೊಟ್ಟಾರ ಚೌಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಕೆಳಗೆ ವಾಹನಗಳ ನಿಲುಗಡೆಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ’ ಎಂದು ಕೊಟ್ಟಾರ ಚೌಕಿ ನಿವಾಸಿ ಸುನೀಲ್‌ ಎಂಬುವವರು ದೂರಿದರು.

ಅದಕ್ಕೆ ಉತ್ತರಿಸಿದ ಕಮಿಷನರ್‌, ‘ಮೇಲ್ಸೇತುವೆಯ ಕೆಳಭಾಗದಲ್ಲಿ ರಾಮಕೃಷ್ಣ ಮಿಷನ್‌ ವತಿಯಿಂದ ಸ್ವಚ್ಛತಾ ಕಾರ್ಯ ಮತ್ತು ಸೌಂದರ್ಯೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಮಠದ ವತಿಯಿಂದ ಇಂಟರ್‌ಲಾಕ್‌ ಅಳವಡಿಸಲಾಗಿದೆ. ಬೇರೆ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ, ನಿರ್ಧಾರಕ್ಕೆ ಬರಲಾಗುವುದು’ ಎಂದರು.

‘ತೇಜಸ್ವಿನಿ ಆಸ್ಪತ್ರೆಯ ಬಳಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ’ ಎಂದು ಕದ್ರಿ ನಿವಾಸಿ ರಮೇಶ್‌ ದೂರಿದರು. ಸರ್ವೀಸ್‌ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯಿಂದ ತೊಂದರೆ ಆಗುತ್ತಿರುವುದಾಗಿ ನಂತೂರು ನಿವಾಸಿ ಜಯಂತ್‌ ದೂರಿದರು. ಎರಡೂ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ, ಕ್ರಮ ಜರುಗಿಸುವುದಾಗಿ ಹರ್ಷ ಭರವಸೆ ನೀಡಿದರು.

ಸ್ಟೇಟ್‌ ಬ್ಯಾಂಕ್‌ನಿಂದ ಬಿಕರ್ನಕಟ್ಟೆ ಮಾರ್ಗವಾಗಿ ಪಡೀಲ್‌ಗೆ ರಾತ್ರಿ 8.30ರ ಬಳಿಕ ಬಸ್‌ ಸಂಚಾರ ಇಲ್ಲದಿರುವ ಕುರಿತು ಅಲ್ಲಿನ ನಿವಾಸಿಯೊಬ್ಬರು ದೂರಿದರು. ಬಸ್‌ಗಳ ಫುಟ್‌ಬೋರ್ಡ್‌ ಎತ್ತರಿಸಿರುವುದರಿಂದ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ ಎಂಬ ದೂರು ಕೂಡ ಬಂತು. ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಕಮಿಷನರ್‌ ತಿಳಿಸಿದರು.

ಜಂಟಿ ಕಾರ್ಯಾಚರಣೆಗೆ ಸಿದ್ಥತೆ:

ನಗರದ ಹಲವು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿ ವ್ಯಾಪಾರ ನಡೆಸುತ್ತಿರುವ ಕುರಿತು ಫೋನ್‌ ಇನ್‌ ಕಾರ್ಯಕ್ರಮಕ್ಕೆ ಹೆಚ್ಚಿನ ದೂರುಗಳು ಬರುತ್ತಿವೆ. ಮಹಾನಗರ ಪಾಲಿಕೆ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬೀದಿಬದಿ ವ್ಯಾಪಾರಿಗಳನ್ನು ರಸ್ತೆ, ಪಾದಚಾರಿ ಮಾರ್ಗದಿಂದ ಹೊರಕ್ಕೆ ಹಾಕಲಾಗುವುದು ಎಂದು ಹೇಳಿದರು.

ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್‌, ಸಂಚಾರ ವಿಭಾಗದ ಎಸಿಪಿ ಕೆ.ಮಂಜುನಾಥ ಶೆಟ್ಟಿ, ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗೋಪಾಲಕೃಷ್ಣ ಭಟ್‌, ಸಿಸಿಆರ್‌ಬಿ ಇನ್‌ಸ್ಪೆಕ್ಟರ್‌ ಎಸ್‌.ಎಚ್‌.ಭಜಂತ್ರಿ, ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.