ADVERTISEMENT

ಮುಖ್ಯಮಂತ್ರಿ ಪದಕ | ಇಲಾಖೆಗೆ ಹೆಮ್ಮೆಯ ಸಂಗತಿ: ಶಶಿಕುಮಾರ್‌

ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಪೊಲೀಸ್‌ ಸಿಬ್ಬಂದಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 3:20 IST
Last Updated 5 ಏಪ್ರಿಲ್ 2022, 3:20 IST
ಮಂಗಳೂರು ನಗರ ಪೊಲೀಸರನ್ನು ಸೋಮವಾರ ಕಮಿಷನರ್‌ ಕಚೇರಿಯಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಇಸಾಕ್ ಕೆ., ಶೋಭಾ, ವನಜಾಕ್ಷಿ ಕೆ., ಎಂ.ಎ.ನಟರಾಜ್‌, ಪ್ರದೀಪ್‌ ಟಿ.ಆರ್‌., ಕುಶಾಲ ಮಣಿಯಾಣಿ (ಕುಳಿತವರು ಎಡದಿಂದ) ಅವರನ್ನು ಸನ್ಮಾನಿಸಲಾಯಿತು. ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ಡಿಸಿಪಿಗಳಾದ ಹರಿರಾಂ ಶಂಕರ್‌, ದಿನೇಶ್‌ ಕುಮಾರ್‌, ಅಧಿಕಾರಿಗಳು ಇದ್ದರು.
ಮಂಗಳೂರು ನಗರ ಪೊಲೀಸರನ್ನು ಸೋಮವಾರ ಕಮಿಷನರ್‌ ಕಚೇರಿಯಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಇಸಾಕ್ ಕೆ., ಶೋಭಾ, ವನಜಾಕ್ಷಿ ಕೆ., ಎಂ.ಎ.ನಟರಾಜ್‌, ಪ್ರದೀಪ್‌ ಟಿ.ಆರ್‌., ಕುಶಾಲ ಮಣಿಯಾಣಿ (ಕುಳಿತವರು ಎಡದಿಂದ) ಅವರನ್ನು ಸನ್ಮಾನಿಸಲಾಯಿತು. ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ಡಿಸಿಪಿಗಳಾದ ಹರಿರಾಂ ಶಂಕರ್‌, ದಿನೇಶ್‌ ಕುಮಾರ್‌, ಅಧಿಕಾರಿಗಳು ಇದ್ದರು.   

ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಆರು ಮಂದಿ ಪೊಲೀಸರನ್ನು ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ಸೋಮವಾರ ಸನ್ಮಾನಿಸಿದರು.

ನಗರದ ಕಮಿಷನರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಎಸಿಪಿ ಎಂ.ಎ.ನಟರಾಜ್, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಪ್ರದೀಪ ಟಿ.ಆರ್., ವನಜಾಕ್ಷಿ ಕೆ., ಶೋಭಾ, ಎಎಸ್‌ಐ ಕುಶಾಲ ಮಣಿಯಾಣಿ, ಹೆಡ್‌ ಕಾನ್‌ಸ್ಟೆಬಲ್‌, ಇಸಾಕ್ ಕೆ. ಅವರನ್ನು ಪೊಲೀಸ್ ಕಮಿಷನರ್ ಸನ್ಮಾನಿಸಿದರು.

ಬಳಿಕ ಮಾತನಾಡಿದ ಎನ್. ಶಶಿಕುಮಾರ್, ಕಮಿಷನರೇಟ್ ವ್ಯಾಪ್ತಿಯಲ್ಲಿ ಆರು ಮಂದಿ ಪೊಲೀಸರು ಮುಖ್ಯಮಂತ್ರಿ ಪದಕ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.

ADVERTISEMENT

ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್‌ ಅವರು, ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ₹1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸಾಮರಸ್ಯ ಗಂಭೀರ ಪ್ರಕರಣ ನಡೆಯದಂತೆ ಈ ಇಬ್ಬರು ಆರೋಪಿಗಳ ಮೇಲಿನ ಗೂಂಡಾ ಕಾಯ್ದೆ ಸಹಕಾರಿಯಾಗಲಿದೆ ಎಂದು ಶಶಿಕುಮಾರ್ ತಿಳಿಸಿದರು.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಾವೂರು ಮತ್ತು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ರೋಹಿದಾಸ್ ಅಲಿಯಾಸ್ ಆಕಾಶಭವನ ಶರಣ್ ಮತ್ತು ಮುಹಮ್ಮದ್ ನವಾಝ್ ಅಲಿಯಾಸ್ ಪಿಂಕಿ ನವಾಝ್, ಕುಖ್ಯಾತ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕ್ರಿಯೆ ನಡೆಸಲಾಗಿತ್ತು. ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಒಳಗೊಂಡ ಸಲಹಾ ಮಂಡಳಿ ಇದಕ್ಕೆ ಅಂಗೀಕಾರ ನೀಡಿದೆ. ಒಂದು ವರ್ಷದವರೆಗೆ ಇದು ಜಾರಿಯಲ್ಲಿರುತ್ತದೆ. ಇವರಿಬ್ಬರು ಸಮಾಜದಲ್ಲಿ ಅಪರಾದ ಕೃತ್ಯ ಹಾಗೂ ಕಾನೂನುಬಾಹಿರ, ಅಶಾಂತಿ ಸೃಷ್ಟಿಸುವ ಕೃತ್ಯದಲ್ಲಿ ತೊಡಗಿದ್ದು, ಮತೀಯ ಸಾಮರಸ್ಯಕ್ಕೆ ಅಡ್ಡಿಯಾಗುವ ಹಲವಾರು ಪ್ರಕರಣಗಳಲ್ಲಿ ಭಾಗಿ ಆಗಿರುವುದರಿಂದ ಗೂಂಡಾ ಕಾಯ್ದೆಗೆ ಶಿಫಾರಸು ಮಾಡಲಾಗಿತ್ತು ಎಂದು ತಿಳಿಸಿದರು.

ನಗರದ ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ ಪ್ರಕ್ರಿಯೆಯಲ್ಲಿ ಸಹಕರಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕರಿಸಿದ ಅಧಿಕಾರಿಗಳನ್ನು ಕೂಡಾ ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.