ADVERTISEMENT

ಮತ್ತೆ ‘ಡಿ ಗ್ಯಾಂಗ್‌’ನ ನಾಲ್ವರ ಬಂಧನ

ಪೊಲೀಸರ ಮೇಲೆ ಗುಂಡಿನ ದಾಳಿ ಪ್ರಕರಣ– ಪಿಸ್ತೂಲ್, ಕಾರು ವಶ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 2:47 IST
Last Updated 6 ಏಪ್ರಿಲ್ 2021, 2:47 IST
‘ಡಿ ಗ್ಯಾಂಗ್‌’ನ ಬಂಧಿತ ಆರೋಪಿಗಳು ಹಾಗೂ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ
‘ಡಿ ಗ್ಯಾಂಗ್‌’ನ ಬಂಧಿತ ಆರೋಪಿಗಳು ಹಾಗೂ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ   

ವಿಟ್ಲ: ಸಾಲೆತ್ತೂರು ಕೊಡಂಗೆಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ ‘ಡಿ ಗ್ಯಾಂಗ್’ ಮುಖ್ಯಸ್ಥ ಸೇರಿದಂತೆ ನಾಲ್ಕು ಮಂದಿಯನ್ನು ಪೆರಾಜೆ ಗ್ರಾಮದ ಬುಡೋಳಿಯಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

‘ಡಿ’ ಗ್ಯಾಂಗ್ ಮುಖ್ಯಸ್ಥನಾದ ಮೀಯಪದವು ಮೂಡಂಬೈಲು ಅಬ್ದುಲ್ ರಹಿಮಾನ್ ಯಾನೆ ರಹೀಂ (25), ಮಹಾರಾಷ್ಟ್ರ ಜಲಗಾವ್ ಮುಕುಂದ ನಗರದ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ ಯಾನೆ ರಾಕಿ ಬಾಯ್ (27), ‘ಡಿ’ ಗ್ಯಾಂಗ್ ಸದಸ್ಯರಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್ ಫಯಾಝ್ ಯಾನೆ ಕೂವ ಫಯಾಝ್ (22), ಮಂಗಲ್ಪಾಡಿ ಸೋಂಕಾಳ್ ನಿವಾಸಿ ಹೈದರ್ ಅಲಿ ಯಾನೆ ಹೈದರ್ (20) ಬಂಧಿತರು.

ವಾರದ ಹಿಂದೆ ಕೇರಳದಲ್ಲಿ ಬಾರೊಂದರಲ್ಲಿ ಘರ್ಷಣೆ ನಡೆಸಿ, ಬೆನ್ನಟ್ಟಿದ ಪೊಲೀಸರ ಮೇಲೆಯೂ ಗುಂಡಿನ ದಾಳಿ ನಡೆಸಿದ ‘ಡಿ’ ಗ್ಯಾಂಗ್ ಅನ್ನು ಸಾಲೆತ್ತೂರು ಚೆಕ್‌ಪೋಸ್ಟ್‌ನಲ್ಲಿ ವಿಟ್ಲ ಪೊಲೀಸರು ತಡೆದಿದ್ದರು. ಆಗ ಅವರ ಮೇಲೆಯೂ ಗುಂಡು ಹಾರಿಸಿದ್ದರು. ಆಗ ಕೇರಳದ ಮಂಜೇಶ್ವರ ಮಂಗಲ್ಪಾಡಿ ಬೈತಿಲ ನಿವಾಸಿ ಅಬ್ದುಲ್ ಲತೀಫ್ ಯಾನೆ ಲತ್ತಿ ಯಾನೆ ಲತೀಫ್ (23), ಮೀಂಜ ಮೀಯಪದವು ಬೆಚ್ಚಂಗಳ ನಿವಾಸಿ ಮಹಮ್ಮದ್ ಶಾಕೀರ್ ಯಾನೆ ಶಾಕೀರ್ (26), ಮೂಡಂಬೈಲು ಅಡ್ಕಂತಗುರಿ ನಿವಾಸಿ ಮಹಮ್ಮದ್ ಅಶ್ವಕ್ ಯಾನೆ ಅಸ್ಪಾಕ್‌ನನ್ನು (25) ಬಂಧಿಸಲಾಗಿತ್ತು. ಉಳಿದವರು ಪರಾರಿಯಾಗಿದ್ದರು.

ADVERTISEMENT

ಈಗ ಬಂಧಿತರಿಂದ 7.65 ಎಂಎಂ ಪಿಸ್ತೂಲ್ 3, ನಾಡಕೋವಿ 1, ಸಜೀವ ಮದ್ದುಗುಂಡು 13 ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್, ಸಬ್ ಇನ್‌ಸ್ಪೆಕ್ಟರ್ ವಿನೋದ್ ರೆಡ್ಡಿ, ಎಎಸ್‌ಐ ಕರುಣಾಕರ್, ಸಿಬ್ಬಂದಿ ಪ್ರಸನ್ನ, ಗಿರೀಶ್, ಪ್ರತಾಪ, ವಿನಾಯಕ, ಲೋಕೇಶ್, ಹೇಮರಾಜ್, ನಝೀರ್, ವಿವೇಕ್, ಪ್ರವೀಣ್ ಪೊಲೀಸ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.