ADVERTISEMENT

ಕೋವಿಡ್ ‘ಸಮನ್ವಯ’ ಸಹಾಯವಾಣಿಗೆ ಚಾಲನೆ

ಅನಿವಾಸಿ ಭಾರತೀಯರ ಸಂಕಷ್ಟಕ್ಕೆ ಪೊಲೀಸ್ ಇಲಾಖೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 3:53 IST
Last Updated 22 ಮೇ 2021, 3:53 IST
ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್ ಅವರು, ಅನಿವಾಸಿ ಭಾರತೀಯರ ಜೊತೆಗೆ ವೆಬಿನಾರ್‌ ಮೂಲಕ ಸಂವಾದ ನಡೆಸಿದರು.
ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್ ಅವರು, ಅನಿವಾಸಿ ಭಾರತೀಯರ ಜೊತೆಗೆ ವೆಬಿನಾರ್‌ ಮೂಲಕ ಸಂವಾದ ನಡೆಸಿದರು.   

ಮಂಗಳೂರು: ಲಾಕ್‌ಡೌನ್ ಸಂದರ್ಭ ದಲ್ಲಿ ಉದ್ಯೋಗದ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸಲು ಹಾಗೂ ನೆರವು ನೀಡಲು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಕೋವಿಡ್ ‘ಸಮನ್ವಯ’ ಸಹಾಯವಾಣಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಜತೆ ಅವರ ಸಮಸ್ಯೆಗಳ ಕುರಿತಂತೆ ಶುಕ್ರವಾರ ‘ಸಮನ್ವಯ’ ವೆಬಿನಾರ್ ಮೂಲಕ ಸಂವಾದ ನಡೆಸಿದ ಬಳಿಕ ಮಂಗಳೂರು ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್ ಅವರು ಸಹಾಯವಾಣಿ ಸಂ. 9480802300ಗೆ ಚಾಲನೆ ನೀಡಿದರು.

ಕುವೈತ್, ಕೆನಡಾ, ಅಮೆರಿಕ, ಯುಎಇ, ಕತಾರ್, ಒಮನ್, ಸೌದಿ ಅರೇಬಿಯಾ, ನ್ಯೂಝಿಲೆಂಡ್, ಆಸ್ಟ್ರೇಲಿಯ, ಇಂಗ್ಲಂಡ್‌, ಇಸ್ರೇಲ್, ಬಹರೇನ್, ಹಾಂಕಾಂಗ್, ಜಮರ್ನಿ ಸೇರಿದಂತೆ 20 ರಾಷ್ಟ್ರಗಳಿಂದ 100ಕ್ಕೂ ಅಧಿಕ ಮಂದಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

ADVERTISEMENT

‘ಮಂಗಳೂರು ಮತ್ತು ಸುತ್ತಲಿನ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಸೇವೆ, ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಸಂಘ–ಸಂಸ್ಥೆಗಳನ್ನು ‘ಸಮನ್ವಯ’ ಎಂಬ ಒಂದೇ ವೇದಿಕೆಯಡಿ ತರಲಾಗಿದೆ. ಇವುಗಳ ಮೂಲಕ ಎನ್‌ಆರ್‌ಐಗಳ ಕುಟುಂಬಸ್ಥರಿಗೂ ತುರ್ತು ಸೇವೆಗಳನ್ನು ಒದಗಿಸಲಾಗುವುದು’ ಎಂದು ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್ ತಿಳಿಸಿದರು.

ಕೋವಿಡ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ (94808 02321)ಗೆ ಕರೆ ಮಾಡಬಹುದು. ಲಾಕ್‌ಡೌನ್ ನಿಯಮ ಉಲ್ಲಂಘನೆ, ಔಷಧ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ ವಂಚನೆ, ಬ್ಲಾಕ್‌ಮೇಲ್ ಮೊದಲಾದ ಘಟನೆಗಳ ಬಗ್ಗೆ 112 ಸಹಾಯವಾಣಿಗೂ ಕರೆ ಮಾಡಬಹುದು ಎಂದು ಹೇಳಿದರು.

ವಿದೇಶದಲ್ಲಿರುವ ಮಂಗಳೂರು ಮೂಲದವರು, ಅವರ ಸಂಪರ್ಕ, ನೆರವಿಗಾಗಿ ಈ ಸಮನ್ವಯ ವೇದಿಕೆಯನ್ನು ಆರಂಭಿಸಲಾಗಿದೆ. ಈ ಸಹಾಯವಾಣಿಗೆ ಬರುವ ಕರೆಗಳಿಗೆ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಸ್ಪಂದಿಸಲು ಸಾಧ್ಯವಾಗದೆ ಇದ್ದಲ್ಲಿ, ಜಿಲ್ಲಾಡಳಿತ ಅಥವಾ ಇಲಾಖೆಗಳು, ನೋಡಲ್ ಅಧಿಕಾರಿಗಳು, ಟಾಸ್ಕ್‌ಫೋರ್ಸ್‌ಗಳ ಗಮನಕ್ಕೆ ತರುವ ಮೂಲಕ ನೆರವು ಒದಗಿಸಲಾಗುವುದು. ಅನಿವಾಸಿ ಭಾರತೀಯರು ಯಾವುದೇ ಸಹಾಯ, ನೆರವಿನ ನಿರೀಕ್ಷೆಗಾಗಿ, ಸಂದೇಶ, ಅಥವಾ ವಾಯ್ಸ್ ರೆಕಾರ್ಡ್, ವಿಡಿಯೊ ಸಂದೇಶ ಕಳುಹಿಸಿದಾಗ ಸಂಬಂಧ ಪಟ್ಟವರಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.