ADVERTISEMENT

ಮಂಗಳೂರು ಗಲಭೆ: ವಿಡಿಯೊ ಬಿಡುಗಡೆ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 9:00 IST
Last Updated 24 ಡಿಸೆಂಬರ್ 2019, 9:00 IST
ಮಂಗಳೂರಿನಲ್ಲಿ ಗಲಭೆ (ಸಂಗ್ರಹ ಚಿತ್ರ)
ಮಂಗಳೂರಿನಲ್ಲಿ ಗಲಭೆ (ಸಂಗ್ರಹ ಚಿತ್ರ)   

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದ ಹಲವು ವಿಡಿಯೊ ತುಣುಕುಗಳನ್ನು ಪೊಲೀಸರು ಫೇಸ್‌ಬುಕ್ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊ ದೃಶ್ಯಾವಳಿ, ಸಿಸಿಟಿವಿ ರೆಕಾರ್ಡಿಂಗ್ ತುಣುಕುಗಳು ಮತ್ತು ಫೋಟೊಗಳು ಇದ್ದರೆ ಹಂಚಿಕೊಳ್ಳುವಂತೆ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಟ್ವಿಟರ್ ಮೂಲಕ ಮನವಿ ಮಾಡಿದ್ದರು.

ಆ ಬಳಿಕ ಪೊಲೀಸರ ವಾಟ್ಸ್ಯಾಪ್‌ಸಂಖ್ಯೆ ಮತ್ತು ಇ-ಮೇಲ್ ವಿಳಾಸಕ್ಕೆ ಹಲವಾರು ವಿಡಿಯೊ ತುಣುಕುಗಳು ಬಂದಿವೆ. ಅವುಗಳನ್ನು Mangaluru City Police ಫೇಸ್‌ಬುಕ್‌ ಪುಟದಲ್ಲಿ ಪೊಲೀಸರು ಹಂಚಿಕೊಂಡಿದ್ದಾರೆ.

ADVERTISEMENT

ಈ ವಿಡಿಯೊ ತುಣುಕುಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಗುಲ್ಬರ್ಗ ಸೇರಿದಂತೆ ವಿವಿಧ ನಗರಗಳ ಪೊಲೀಸರ ಜೊತೆ ಹಂಚಿಕೊಂಡಿರುವ ಕಮಿಷನರ್, ಗಲಭೆ ನಡೆಸಿದವರ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಆರೋಪಿಗಳ ಗುರುತು ಪತ್ತೆ ಮಾಡಲು ಸಹಕರಿಸುವವರಿಗೆ ಬಹುಮಾನ ನೀಡುವುದಾಗಿಯೂ ತಿಳಿಸಿದ್ದಾರೆ.

‘ನಮ್ಮ ಮನವಿಗೆ ಅಭೂತಪೂರ್ವ ಸ್ಪಂದನೆ ನೀಡಿರುವ ನಗರದ ಜನತೆ ಗಲಭೆ ನಡೆಸಿ, ಹಿಂಸಾಚಾರ ಸೃಷ್ಟಿಸಿರುವವರ ಕುರಿತು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಇನ್ನೂ ಹೆಚ್ಚಿನ ಜನರು ನಮ್ಮೊಂದಿಗೆ ಇಂತಹ ಸಾಕ್ಷ್ಯಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡುತ್ತೇನೆ’ಎಂದು ಕಮಿಷನರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.