ADVERTISEMENT

‘ವರ್ಷದೊಳಗೆ ನೂತನ ಠಾಣೆ ಕಟ್ಟಡ ನಿರ್ಮಾಣ’

ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಆರಗ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 11:08 IST
Last Updated 27 ಜೂನ್ 2022, 11:08 IST
ಚಿತ್ರ:27ಎಸ್ಯುಬಿ01  ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಚಿತ್ರ:27ಎಸ್ಯುಬಿ01  ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ   

ಸುಬ್ರಹ್ಮಣ್ಯ: ‘ಸುಬ್ರಹ್ಮಣ್ಯದ ಪೊಲೀಸ್ ಠಾಣೆ ಕಟ್ಟಡ ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿಗೆ ಹೊಸ ಠಾಣಾ ಕಟ್ಟಡ ನಿರ್ಮಿಸಲು ಅನುದಾನ ಮೀಸಲಿಟ್ಟು ಟೆಂಡರ್ ಕರೆಯಲಾಗಿದೆ. ವರ್ಷದೊಳಗೆ ಕಟ್ಟಡ ನಿರ್ಮಾಣಗೊಳ್ಳಲಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸೋಮವಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಠಾಣೆಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ತಿಂಗಳೊಳಗೆ ಮುಗಿಯಲಿದೆ. ಕ್ರೀಯಾಯೋಜನೆ ಈಗಾಗಲೇ ತಯಾರಿಸಲಾಗಿದೆ’ಎಂದರು.

ಕುಕ್ಕೆ ಕ್ಷೇತ್ರದಲ್ಲಿ ವಾರದಲ್ಲಿ ಎರಡು ದಿನ ಭಕ್ತರ ದಟ್ಟಣೆ ಹೆಚ್ಚುತ್ತಿರುತ್ತದೆ. ಈ ದಿನಗಳಲ್ಲಿ ಕಾರ್ಯನಿರ್ವಹಿಸಲು ಬೇರೆಡೆಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವ ಕುರಿತು ಅಥವಾ ಸುಬ್ರಹ್ಮಣ್ಯ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಿಸುವ ಬಗ್ಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.

ADVERTISEMENT

ಠಾಣೆಯ ನೂತನ ಕಟ್ಟಡ ನಿರ್ಮಾಣವಾಗಲಿರುವ ಸ್ಥಳವನ್ನು ಸಚಿವರು ಪರಿಶೀಲಿಸಿದರು. ಸಂಬಂಧಿಸಿದವರ ಜತೆ ದೂರವಾಣಿಯಲ್ಲಿ ಮಾತನಾಡಿ ಶೀಘ್ರ ಕಟ್ಟಡ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್‌ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣಾ ಸಬ್‌ ಇನ್‌ಸ್ಪೆಕ್ಟರ್‌ ಜಂಬೂರಾಜ್ ಮಹಾಜನ್, ಕರಣಾಕರ ಇದ್ದರು.

‘ಪೊಲೀಸ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಡಿವೈಎಸ್ಪಿ ಸೇರಿದಂತೆ ತಪ್ಪಿತಸ್ಥರನ್ನು ವಶಕ್ಕೆ ಪಡೆಯಲಾಗಿದೆ. ಬ್ಲೂಟೂಥ್ ಬಳಸಿ ಅಕ್ರಮ ಎಸಗಿರುವ ಬಗ್ಗೆ ಎಫ್ಎಸ್ಎಲ್ ವರದಿ ಬರಬೇಕಿದೆ. ಇದರಿಂದ ಸ್ವಲ್ಪ ತಡವಾಗುತ್ತಿದೆ. ತಪ್ಪಿತಸ್ಥರನ್ನು ಖಂಡಿತ ಜೈಲು ಸೇರಿಸುತ್ತೇವೆ. ಕೋರ್ಟ್‌ ತೀರ್ಮಾನ ಏನು ಎಂದು ತಿಳಿದು ಮರು ಪರೀಕ್ಷೆ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಅಗ್ನಿಪಥ್ ಉತ್ತಮ ಯೋಜನೆಯಾಗಿದೆ. ಸರ್ಕಾರದ ಯೋಜನೆಗಳನ್ನು ವಿರೋಧಿಸುವ ರಾಜಕೀಯ ಈ ದೇಶದ ಕಪ್ಪುಚುಕ್ಕೆ. ಇದು ಹೋಗಬೇಕಿದೆ’ ಎಂದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಎಂಬುದು ನಮ್ಮಲ್ಲಿ ಇಲ್’ಲ ಎಂದರು.

ಪ್ರತ್ಯೇಖ ರಾಜ್ಯ ರಚನೆ ಹೇಳಿಕೆ ತಪ್ಪು. ಯಾವ ಹಿನ್ನಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಉಮೇಶ್ ಕತ್ತಿ ಸೇರಿದಂತೆ ಯಾರೆಲ್ಲ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಇದ್ದಾರೋ, ಅವರೆಲ್ಲ ಆ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಗೆ ಅನುದಾನ ತೆಗೆದುಕೊಂಡಿದ್ದಾರೆ. ಉಮೇಶ್ ಕತ್ತಿ ಈ ಮಾತನ್ನು ಪುನರ್ ಪರಿಶೀಲನೆ ಮಾಡಬೇಕಾಗಿದೆ’ ಎಂದು ನಾನು ಹೇಳುತ್ತೇನೆ ಎಂದರು.

‘ಪಠ್ಯಪುಸ್ತಕದಲ್ಲಿ ಯಾವುದೇ ತೊಂದರೆಯಾಗಿಲ್ಲ. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸುವ ಕೆಲಸಗಳಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.