ADVERTISEMENT

ಉನ್ನತ ಮಟ್ಟದ ತನಿಖೆಗೆ ಬಂಗೇರ ಒತ್ತಾಯ

ಬ್ಯಾಂಕ್‌ ಸಿಇಒ ರವೀಂದ್ರನ್ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:40 IST
Last Updated 5 ಮೇ 2021, 5:40 IST
ವಸಂತ ಬಂಗೇರ
ವಸಂತ ಬಂಗೇರ   

ಬೆಳ್ತಂಗಡಿ: ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರವೀಂದ್ರನ್ ಆತ್ಮಹತ್ಯೆಗೆ ಆಡಳಿತ ಮಂಡಳಿಯ ಮಾನಸಿಕ ಕಿರುಕುಳವೇ ಕಾರಣವಾಗಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಒತ್ತಾಯಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಆಡಳಿತ ಮಂಡಳಿ ಸದಸ್ಯರು ತಮಗೆ ಬೇಕಾದವರಿಗೆ ಸಾಲ ಕೊಡಿಸಲು ಒತ್ತಾಯಿಸುತ್ತಿದ್ದರು. ಒಪ್ಪದಿದ್ದಾಗ ಬಲತ್ಕಾರದಿಂದ ಸಿಇಒ ರಾಜೀನಾಮೆ ಪಡೆದಿರುವುದೇ ಆತ್ಮಹತ್ಯೆಗೆ ಕಾರಣ. 3-4 ವರ್ಷಗಳಿಂದ ಸಂಘದ ಆಡಳಿತ ಮಂಡಳಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸಿದ್ದು, ಡಿಸಿಸಿ ಬ್ಯಾಂಕ್‌ ಮತ್ತು ಸಹಕಾರಿ ಉಪನಿಬಂಧಕರ ನೇತೃತ್ವದಲ್ಲಿ ಪ್ರತ್ಯೇಕವಾದ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆಡಳಿತ ಮಂಡಳಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ರವೀಂದ್ರನ್ ನೀಡಿದ್ದಾರೆ ಎನ್ನಲಾದ ರಾಜೀನಾಮೆ ಪತ್ರದ ಕೈಬರಹ ಮತ್ತು ಅವರ ಡೆತ್‍ನೋಟ್‍ನಲ್ಲಿರುವ ಕೈ ಬರಹ ಮತ್ತು ಸಹಿಯಲ್ಲಿ ತುಂಬಾ ವ್ಯತ್ಯಾಸ ಇದೆ. ಅವರು ನೀಡಿದ್ದಾರೆ ಎನ್ನಲಾದ ರಾಜೀನಾಮೆ ಪತ್ರದ ಬಗ್ಗೆ ಅನುಮಾನವಿದೆ’ ಎಂದು ಹೇಳಿ, ದಾಖಲೆ ಮಾಧ್ಯಮಕ್ಕೆ ನೀಡಿದರು.

ADVERTISEMENT

ಅಕ್ಕಿ ಕಳವು: ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಪಡಿತರ ಕೇಂದ್ರದಿಂದ ಅಕ್ಕಿಯನ್ನು ಕಳವು ಮಾಡಿದ್ದು, ಅದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಶಾಸಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪ್ರಕರಣ ದಾಖಲಿಸಿಲ್ಲ. ಇದೇ ರೀತಿಯಲ್ಲಿ ತಾಲ್ಲೂಕಿನ ವಿವಿಧ ಪಡಿತರ ಅಂಗಡಿಗಳಿಂದ ಅಕ್ಕಿಯನ್ನು ಕಳವು ಮಾಡಲಾಗುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನೆರಿಯದಲ್ಲಿ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಆ ಭಾಗದಲ್ಲಿ ಸೋಂಕಿತರು ಹೆಚ್ಚಾಗಲು ಅದೇ ಕಾರಣ. ಕಾರ್ಯಕ್ರಮ ಆಯೋಜಿಸಿದ್ದ ಗ್ರಾಮ ಸಹಾಯಕನ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು’ ಎಂದರು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಹಾಗೂ ನಗರ ಘಟಕದ ಅಧ್ಯಕ್ಷರಾದ ರಂಜನ್ ಜಿ.ಗೌಡ, ಶೈಲೇಶ್ ಕುಮಾರ್, ಮುಖಂಡರಾದ ಮನೋಹರ್ ಕುಮಾರ್, ವಸಂತ ಬಿ.ಕೆ, ಗ್ರೇಸಿಯಸ್ ವೇಗಸ್, ಅನಿಲ್ ಪೈ, ಸಿಪಿಎಂನ ಶೇಖರ ಲಾಯಿಲ, ಜೆಡಿಎಸ್‌ನ ಸಿಂಧೂದೇವಿ ಇದ್ದರು.

ಇಬ್ಬರು ನಿರ್ದೇಶಕರ ವಿರುದ್ಧ ಪ್ರಕರಣ

ಬೆಳ್ತಂಗಡಿ: ರವೀಂದ್ರನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಡೆತ್‌ನೋಟ್‌ನ ಆಧಾರದ ಮೇಲೆ ಹಾಗೂ ಅವರ ಪತ್ನಿ ನೀಡಿರುವ ದೂರಿನಂತೆ ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಜಯರಾಮ ಭಂಡಾರಿ ಹಾಗೂ ರಘುಚಂದ್ರ ಭಟ್ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಆತ್ಮಹತ್ಯಾ ಪ್ರೇರಣೆ ಪ್ರಕರಣ ದಾಖಲಿಸಲಾಗಿದೆ.

ರವೀಂದ್ರನ್‌ ಅವರು ಡೆತ್‌ನೋಟ್‍ನಲ್ಲಿ ‘ಅಧ್ಯಕ್ಷರನ್ನು ನಾನು ಸೋಲಲು ಬಿಡುವುದಿಲ್ಲ. ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಸ್ವರ್ಣಗೌರಿ, ಜಯರಾಮ ಭಂಡಾರಿ ಮತ್ತು ರಘುಚಂದ್ರರನ್ನು ಕ್ಷಮಿಸುವುದಿಲ್ಲ. ನನ್ನ ಮಗಳಿಗೆ ಕ್ಲರ್ಕ್ ಕೆಲಸ ಕೊಡಿಸಿ. ಬೊಳಿಯಾರಿನಲ್ಲಿ 0.12 ಎಕರೆ ಮತ್ತು ಪಾಲಿನಲ್ಲಿ 2 ಎಕರೆ ಜಮೀನು ಬರಬೇಕು ಅದನ್ನು ಕೊಡಿಸಿ. ಇಡೀ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟವನು ಅಂತ್ಯಕಾಲದಲ್ಲಿ ಮುಟ್ಟಾಳರಿಂದ ಅವಮಾನಿತನಾಗಿರಲು ಬಯಸುವುದಿಲ್ಲ. ಸನ್ಮಿತ್ರ ಸಹೋದ್ಯೋಗಿಗಳಿಗೆ ಶುಭಾಶಯಗಳು. ಶತ್ರುಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬರೆದಿದ್ದರು. ಅದರ ಆಧಾರದಲ್ಲಿ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.