ADVERTISEMENT

ಉಮ್ರಾ ಯಾತ್ರೆ ಮುಂದೂಡಿ- ಮತದಾನ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 5:18 IST
Last Updated 17 ಏಪ್ರಿಲ್ 2024, 5:18 IST

ಮಂಗಳೂರು: ‘ಮೊದಲೇ ನಿಗದಿಪಡಿಸಲಾದ ಉಮ್ರಾ ಯಾತ್ರೆ ಕೈಗೊಳ್ಳುವ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ತೊಡಕಾಗುವುದಾದರೆ, ಅಂತಹ ಯಾತ್ರೆಗಳನ್ನು ಮುಂದೂಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಸಲಹೆ ನೀಡಿದ್ದಾರೆ.

‘ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಆದರೆ ಆ ಸಂದರ್ಭದಲ್ಲಿ ಹಲವು  ಪ್ರವಾಸೋದ್ಯಮ ಸಂಸ್ಥೆಗಳು ಉಮ್ರಾ ಯಾತ್ರೆ ಹಾಗೂ ಇನ್ನಿತರ ಪ್ರವಾಸಗಳನ್ನು ನಿಗದಿಪಡಿಸಿವೆ. ಇದರಿಂದಾಗಿ ಕೆಲ ಮತದಾರರು ಮತದಾನದಿಂದ ವಂಚಿತರಾಗಬೇಕಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಂದಲೂ  ಕೋರಿಕೆಗಳು ಹಾಗೂ ದೂರುಗಳು ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ಚಿಂತಕರು, ಸಮಾಜ ಸೇವಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.’ 

‘ಯಾತ್ರಿಗಳು ಯಾವುದೇ ಕಾರಣಕ್ಕೂ ಮತದಾನ ಮಾಡದೇ, ಉಮ್ರಾಕ್ಕೆ ತೆರಳಬಾರದು. ಪ್ರವಾಸೋದ್ಯಮ ಸಂಸ್ಥೆಗಳು ಹಾಗೂ ಅವುಗಳ ಏಜೆಂಟರು ಏ. 26ರ ಸಂದರ್ಭದಲ್ಲಿ ಕೈಗೊಳ್ಳಬೇಕಾಗುವ ಉಮ್ರಾ ಯಾತ್ರೆಗಳನ್ನು ರದ್ದುಪಡಿಸಿ, ಏ. 27ರ ನಂತರ ಆಯೋಜಿಸಬೇಕು. ಈಗಾಗಲೇ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರೆ, ಅದನ್ನೂ ರದ್ದುಪಡಿಸಬೇಕು. ಆಯಾ ಜಮಾತ್ ಸಮಿತಿಗಳು ಪ್ರತೀ ಶುಕ್ರವಾರ ಈ ಬಗ್ಗೆ ಜನರಿಗೆ ಸಂದೇಶ ನೀಡಬೇಕು’ ಎಂದು ಅವರು ಕೋರಿದ್ದಾರೆ.

ADVERTISEMENT

‘ಮತದಾನ ಪ್ರತಿಯೊಬ್ಬ ಪ್ರಜೆಯ ಅತ್ಯುನ್ನತ ಕರ್ತವ್ಯ. ದೇಶಕ್ಕೆ ಸುಭದ್ರ ಸರಕಾರ ಮತ್ತು ಉತ್ತಮ ಆಡಳಿತ ಸಿಗಲು ಪ್ರತಿಯೊಬ್ಬರು ಮತದಾನ ಮಾಡಬೇಕಿದೆ. ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗುವಂತೆ ನಾವೆಲ್ಲರೂ ಪುಯತ್ನಿಸಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

‘ದೇಶದ ಪ್ರಜಾಪ್ರಭುತ್ವ ಉಳಿಸಲು ಮತದಾನ  ಪ್ರಾಮುಖ್ಯ. 5 ವರ್ಷಗಳ 1824 ದಿವಸಗಳಲ್ಲಿ ಈ ಒಂದು ದಿವಸವನ್ನು ಈ ಪವಿತ್ರ ಕಾರ್ಯಕ್ಕೆ ಕಾಯ್ದಿರಿಸಿ.  ಉಳಿದ ದಿನ ಎಲ್ಲಿಗೆ ಬೇಕಾದರು ಯಾತ್ರೆ ಕೈಗೊಳ್ಳಬಹುದು’ ಎಂದು  ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.