ADVERTISEMENT

ಜ್ವರವನ್ನು ನಿರ್ಲಕ್ಷಿಸಬೇಡಿ: ತಪಾಸಣೆ ಮಾಡಿಸಿಕೊಳ್ಳಿ

ಪ್ರಜಾವಾಣಿ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:05 IST
Last Updated 22 ಮೇ 2020, 15:05 IST
ಡಾ.ರಾಮಚಂದ್ರ ಬಾಯರಿ ಕರೆಗಳಿಗೆ ಉತ್ತರಿಸಿದರು.
ಡಾ.ರಾಮಚಂದ್ರ ಬಾಯರಿ ಕರೆಗಳಿಗೆ ಉತ್ತರಿಸಿದರು.   

ಮಂಗಳೂರು: ಮಳೆಗಾಲ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಶೀತ, ಜ್ವರ ಕಾಣಿಸಿಕೊಳ್ಳುತ್ತದೆ. ಹಾಗಂತ ಎಲ್ಲ ಜ್ವರವೂ ಕೋವಿಡ್‌–19 ಎಂದು ಹೇಳಲು ಆಗುವುದಿಲ್ಲ. ಯಾವುದೇ ಜ್ವರ ಬಂದಲ್ಲಿ ನಿರ್ಲಕ್ಷಿಸದೇ, ಕೂಡಲೇ ಹತ್ತಿರದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದರು.

ಶುಕ್ರವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಜನರ ಕರೆಗಳಿಗೆ ಉತ್ತರಿಸಿದ ಅವರು, ಜ್ವರ ಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಅವರು ಜ್ವರದ ಕಾರಣವನ್ನು ಪತ್ತೆ ಮಾಡಿ, ಸೂಕ್ತ ಸಲಹೆ ನೀಡಲಿದ್ದಾರೆ ಎಂದರು.

ಮಳೆಗಾಲದಲ್ಲಿ ಮಲೇರಿಯಾ, ಡೆಂಗಿ, ಚಿಕೂನ್‌ ಗುನ್ಯಾ ಸೇರಿದಂತೆ ಹಲವು ರೀತಿಯ ಜ್ವರ ಬಾಧಿಸುವುದು ಸಾಮಾನ್ಯ. ಆದರೆ, ಈ ಬಾರಿ ಕೋವಿಡ್–19 ಸೋಂಕು ವ್ಯಾಪಿಸುತ್ತಿರುವುದರಿಂದ ಜ್ವರವನ್ನು ನಿರ್ಲಕ್ಷಿಸುವುದು ಬೇಡ. ಹತ್ತಿರದ ಫೀವರ್ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲಿನ ವೈದ್ಯರು ಸೂಕ್ತ ಮುಂಜಾಗ್ರತೆ ವಹಿಸಿ ತಪಾಸಣೆ ಮಾಡಲಿದ್ದಾರೆ. ಶಂಕಿತ ಕೋವಿಡ್–19 ಪ್ರಕರಣಗಳಿದ್ದರೆ, ಆಯಾ ತಾಲ್ಲೂಕಿನ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ನಂತರ ಗಂಟಲು ದ್ರವದ ಮಾದರಿಯನ್ನು ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ನೆಗೆಟಿವ್‌ ಬಂದಲ್ಲಿ ತೊಂದರೆ ಇಲ್ಲ: ವಿದೇಶದಿಂದ ಬಂದವರನ್ನು ನಿಗದಿತ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ನಂತರ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಮೊದಲ ಹಂತದಲ್ಲಿ ನೆಗೆಟಿವ್‌ ಬಂದರೂ, 12 ದಿನಗಳ ನಂತರ ಮತ್ತೊಮ್ಮ ಗಂಟಲು ದ್ರವ ತಪಾಸಣೆ ಮಾಡಲಾಗುತ್ತದೆ. ಎರಡೂ ಪರೀಕ್ಷೆಗಳಲ್ಲಿ ನೆಗೆಟಿವ್‌ ಬಂದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಡಾ.ಬಾಯರಿ ಸ್ಪಷ್ಟಪಡಿಸಿದರು.

4 ವರ್ಗದ ಜನರಿಗೆ ಹೋಂ ಕ್ವಾರಂಟೈನ್‌: ವಿದೇಶದಿಂದ ಬಂದಿರುವ ಜನರಲ್ಲಿ ನಾಲ್ಕು ವರ್ಗದ ಮಂದಿಗೆ ಹೋಂ ಕ್ವಾರಂಟೈನ್‌ಗೆ ಸರ್ಕಾರ ಅವಕಾಶ ನೀಡಿದೆ ಎಂದು ತಿಳಿಸಿದರು.

ಗರ್ಭಿಣಿಯರು, ವೃದ್ಧರು, ಮಕ್ಕಳು ಹಾಗೂ ಕ್ಯಾನ್ಸರ್‌, ಮುಂತಾದ ರೋಗಗಳಿಂದ ಬಳಲುವವರ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್‌ ಬಂದಲ್ಲಿ ಅಂಥವರಿಗೆ ಹೋಂ ಕ್ವಾರಂಟೈನ್‌ ಮಾಡಬಹುದು. ಕೋವಿಡ್–19 ವೈರಸ್‌ನಿಂದ ಬರುವ ರೋಗವಾಗಿದ್ದು, ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದಲ್ಲಿ, ಅಂಥವರಿಂದ ಯಾವುದೇ ತೊಂದರೆ ಇಲ್ಲ ಎಂದರು.

ಕೋವಿಡ್‌–19ನಿಂದ ಗುಣಮುಖರಾದವರಿಗೆ ಮುಂದೆ ಬೇರೆ ರೀತಿಯ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಸಾಮಾಜಿಕವಾಗಿ ಅವರನ್ನು ನೋಡುವ ದೃಷ್ಟಿಕೋನದಿಂದ ಅವರಿಗೆ ಮಾನಸಿಕವಾಗಿ ತೊಂದರೆ ಆಗುವ ಸಾಧ್ಯತೆ ಇದೆ. ಅದನ್ನು ಬಿಟ್ಟು ಬೇರೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಪತ್ತೆ ಹೇಗೆ?: ಯಾವುದೇ ವ್ಯಕ್ತಿಗೆ ಕೋವಿಡ್‌–19 ಸೋಂಕು ಇದೆಯೇ ಎಂಬುದನ್ನು ತಿಳಿದುಕೊಳ್ಳುವ ಬಗೆಯನ್ನು ವಿವರಿಸಿದ ಡಾ.ರಾಮಚಂದ್ರ ಬಾಯರಿ, ಶೀತ, ಒಣಕೆಮ್ಮು, ಜ್ವರ ಅಥವಾ ಇನ್‌ಫ್ಲುಯೆಂಜಾ ಲೈನ್‌ ಇಲ್‌ನೆಸ್ (ಐಎಲ್‌ಐ), ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ)ಯಂತಹ ಲಕ್ಷಣ ಇದ್ದಲ್ಲಿ, ಅಂತಹ ವ್ಯಕ್ತಿಗಳಿಂದ ಆದಷ್ಟು ದೂರವಿರಿ. ಜತೆಗೆ ಅವರ ಪ್ರಯಾಣದ ವಿವರ ಪಡೆಯಿರಿ. ಅವರು ದೂರದ ಊರುಗಳಿಗೆ ಹೋಗಿ ಬಂದಿದ್ದರೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಇನ್ನೂ ಎರಡು ಕಡೆ ಪರೀಕ್ಷಾ ಕೇಂದ್ರ
ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿಯನ್ನು 24 ಗಂಟೆಗಳಲ್ಲಿ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದೆ. ಹಾಗಾಗಿ ಜಿಲ್ಲೆಯಲ್ಲಿ ಸದ್ಯಕ್ಕೆ ಮೂರು ಪರೀಕ್ಷಾ ಕೇಂದ್ರಗಳಿದ್ದು, ಇನ್ನೂ ಎರಡು ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಡಾ.ರಾಮಚಂದ್ರ ಬಾಯರಿ ತಿಳಿಸಿದರು.

ಈಗಾಗಲೇ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ, ಯೇನೆಪೋಯ ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ಮಂಗಳೂರಿನ ಕೆಎಂಸಿ ಆಸ್ಪತ್ರೆ ಮತ್ತು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಪರೀಕ್ಷಾ ಕೇಂದ್ರಗಳು ಆರಂಭವಾಗಲಿವೆ. ವೆನ್ಲಾಕ್‌ನಲ್ಲಿ ಮಾದರಿಗಳ ಸಂಖ್ಯೆ ಹೆಚ್ಚಾದಲ್ಲಿ, ಖಾಸಗಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು. ಸರ್ಕಾರ ಪ್ರತಿ ಮಾದರಿ ಪರೀಕ್ಷೆಗೆ ₹2,250 ದರ ನಿಗದಿಪಡಿಸಿದೆ ಎಂದು ಹೇಳಿದರು.

ಕಂಟೈನ್‌ಮೆಂಟ್‌: ಶೀಘ್ರ ಹೊಸ ಆದೇಶ
ಕಂಟೈನ್‌ಮೆಂಟ್‌ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರ ಶೀಘ್ರದಲ್ಲಿಯೇ ಹೊಸ ಆದೇಶ ಹೊರಡಿಸಲಿದೆ ಎಂದು ಡಾ.ರಾಮಚಂದ್ರ ಬಾಯರಿ ತಿಳಿಸಿದರು.

ರೋಗಿಯ ಸುತ್ತಲಿನ ಮನೆಗಳಿಗೆ ಸೀಮಿತವಾಗಿ ಕಂಟೈನ್‌ಮೆಂಟ್ ವಲಯದ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರ ಹೊಸ ಆದೇಶ ಬರಲಿದೆ ಎಂದರು.

*
ಕಾಮಾಲೆ ರೋಗವು ಹಲವು ರೀತಿಯಿಂದ ಬರುತ್ತದೆ. ಯಾವ ಕಾಮಾಲೆ ರೋಗ ಎಂಬುದರ ತಪಾಸಣೆ ಅಗತ್ಯ. ಹಾಗಾಗಿ ನಾಟಿ ವೈದ್ಯರ ಬಳಿ ಔಷಧಿ ಪಡೆಯುವುದು ಬೇಡ.
-ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.