ADVERTISEMENT

ಯುವಕರೇ ಎಚ್ಚೆತ್ತುಕೊಳ್ಳಿ, ನಾರಾಯಣಗುರು ಪಥದಲ್ಲಿ ನಡೆಯಿರಿ -ಪ್ರಣವಾನಂದ ಸ್ವಾಮೀಜಿ

ಪ್ರವೀಣ್‌ ಬಂಧುಗಳಿಗೆ ಸಾಂತ್ವನ ಹೇಳಿದ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:09 IST
Last Updated 29 ಜುಲೈ 2022, 4:09 IST
ಪ್ರಣವಾನಂದ ಸ್ವಾಮೀಜಿ ಪ್ರವೀಣ್‌ ನೆಟ್ಟಾರು ಅವರ ಬಂಧುಗಳನ್ನು ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದರು
ಪ್ರಣವಾನಂದ ಸ್ವಾಮೀಜಿ ಪ್ರವೀಣ್‌ ನೆಟ್ಟಾರು ಅವರ ಬಂಧುಗಳನ್ನು ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದರು   

ಬೆಳ್ಳಾರೆ: ‘ಈಗಾಗಲೇ ಅನೇಕ ಬಿಲ್ಲವ ಯುವಕರು ಹತ್ಯೆಗೀಡಾಗಿದ್ದಾರೆ. ಇದು ಮರುಕಳಿಸಬಾರದು. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕವಾದರೂ ಇಡೀ ಬಿಲ್ಲವ ಯುವಕರು ಎಚ್ಚೆತ್ತುಕೊಳ್ಳಬೇಕು. ಪ್ರಚೋದನೆಗಳಿಗೆ ಒಳಗಾಗದೆ ಸಂಯಮದಿಂದ ಇರಬೇಕು. ರಾಜಕೀಯ ಸಿದ್ಧಾಂತಗಳಿಗೆ ಬಲಿಯಾಗದೆ, ತಾವು ದುಡಿದು ತಮ್ಮ ಮನೆಯವರಿಗೋಸ್ಕರ ಬದುಕಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ಅಹಿಂಸಾ ಮಾರ್ಗದಲ್ಲಿ ಮುಂದುವರೆಯಬೇಕು‘ ಎಂದು ಪ್ರಣವಾನಂದ ಸ್ವಾಮೀಜಿ ಕಿವಿಮಾತು ಹೇಳಿದರು

ಪ್ರವೀಣ್ ನೆಟ್ಟಾರು ಅವರ ಬಂಧುಗಳನ್ನು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರವೀಣ್‌ ಅವರ ಕುಟುಂಬಕ್ಕೆ ಸರ್ಕಾರ ₹ 1ಕೋಟಿ ರೂಪಾಯಿ ಪರಿಹಾರ ಹಾಗೂ ಅವರ ಧರ್ಮಪತ್ನಿಗೆ ಕೂಡಲೇ ಸರ್ಕಾರಿ ನೌಕರಿ ಕೊಡಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ADVERTISEMENT

ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಖಜಾಂಚಿ ಆರ್. ಪದ್ಮರಾಜ್, ‘ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಪ್ರವೀಣ್ ಕೊಲೆ ಪ್ರಕರಣವೂ ಸೇರಿ, ಸಮಾಜದಲ್ಲಿ ಶಾಂತಿ ಕದಡುವ ಕೋಮುವಾದದಂತಹ ಎಲ್ಲ ಪ್ರಕರಣಗಳನ್ನು ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರು ತಿಂಗಳೊಳಗೆ ಇತ್ಯರ್ಥಪಡಿಸಬೇಕು. ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕ್ರಮ ಕೈಗೊಳ್ಳಬೇಕು‘ ಎಂದು ಆಗ್ರಹಿಸಿದರು.

‘ಪ್ರವೀಣ್ ಕೊಲೆ ಪ್ರಕರಣದಲ್ಲಿ ಸರ್ಕಾರದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಕೆಲವು ದಿನಗಳ ಹಿಂದೆ, ಮಾಧ್ಯಮಗಳು ಪ್ರತೀಕಾರದ ಕೊಲೆ ನಡೆಯಬಹುದು ಎಂದು ಸಂಶಯ ವ್ಯಕ್ತಪಡಿಸಿ, ಸರ್ಕಾರವನ್ನು ಎಚ್ಚರಿಸಿದರೂ ಏನೂ ಕ್ರಮ ಕೈಗೊಳ್ಳದ ಗುಪ್ತಚರ ಇಲಾಖೆಯ ವಿಫಲತೆಗೆ ಸಾಕ್ಷಿಯಾಗಿದೆ’ ಎಂದು ಆರೋಪಿಸಿದರು.

‘ಪ್ರವೀಣ್ ನಮ್ಮ ಕುಟುಂಬದ ಸದಸ್ಯ. ಮನೆಯವರ ದುಃಖದ ಸಮಯದಲ್ಲಿ ಬಿಲ್ಲವ ಸಮಾಜ ಸದಾ ಇರುತ್ತದೆ‘ ಎಂದು ತಿಳಿಸಿದರು.

ಗೆಜ್ಜೆಗಿರಿ ನಂದನ ಬಿತ್ತಲ್ ಕ್ಷೇತ್ರದ ಗೌರವಾಧ್ಯಕ್ಷ ಜಯಂತ ನಡುಬೈಲ್, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಬೆಳ್ತಂಗಡಿ ಬಿಲ್ಲವ ಯುವವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ವಕೀಲ ಮನೋಹರ್, ವೇಣೂರು ಯುವವಾಹಿನಿ ಅಧ್ಯಕ್ಷ ಯೋಗೀಶ್, ರವಿ ಪೂಜಾರಿ ಚಿಲಿಂಬಿ, ರಾಜೇಂದ್ರ ಚಿಲಿಂಬಿ ನವೀನ್ ಪಚ್ಚೇರಿ, ಮೋಹನ್ ಪಡೀಲ್, ಪುರುಷೋತ್ತಮ ಸಜಿಪ, ರಾಜೇಶ್ ಸುವರ್ಣ, ಪ್ರವೀಣ್ ಅರ್ಕುಳ ಮೊದಲಾದವರಿದ್ದರು.

ಬಿಲ್ಲವ ಸಮಾಜದಿಂದ ಮನೆ ನಿರ್ಮಾಣ‌
ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಮಸ್ತ ಬಿಲ್ಲವ ಸಮುದಾಯದ ನೇತೃತ್ವದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಸಂಘಟಕರು ಭರವಸೆ ನೀಡಿದರು. ಈ ಸಂದರ್ಭ ಗುರುಬೆಳದಿಂಗಳು ಫೌಂಡೇಶನ್‌ನಿಂದ ₹ 1 ಲಕ್ಷ ಪರಿಹಾರ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.